ಭಾರತೀಯ ಸಂಸ್ಕೃತಿ ಪರಂಪರೆ ಉಳಿಸಿ-ಬೆಳೆಸಲು ಕರೆ

ತುಮಕೂರು,ಜು. ೧೨- ಭಾರತೀಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜತೆಗೆ ಅದನ್ನು ಗೌರವಿಸಬೇಕು ಎಂದು ಜಿ.ಪಂ.ಸಿಇಓ ಅನೀಸ್ ಕಣ್ಮಣಿ ಜಾಯ್ ಹೇಳಿದರು.

ನಗರದ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ಧಗಂಗಾ ಮಠ ಸಮಾಜದಲ್ಲಿ ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಶ್ರೀ ಮಠದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರು ತಮ್ಮ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕು. ತಮ್ಮ ಗುಪ್ತವಾಗಿರುವ ಕೌಶಲ್ಯವನ್ನು ಸಾಧಿಸುವ ಗುರಿ ಹೊಂದಬೇಕು ಎಂದರು.

ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಅರಿತುಕೊಂಡು ಮುನ್ನಡೆದು ಶಾಲೆಗೆ ಮತ್ತು ಪೋಷಕರಿಗೆ ಹೆಸರು ತರಬೇಕು. ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ವಾತಾವರಣ ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣ ದೊರಕುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಿ ಎಂದು ಹೇಳಿದರು.

ಬೆಂಗಳೂರಿನ ಜಗದ್ಗುರು ಶ್ರೀ ರೇಣುಕಾಚಾರ್ಯ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಎಲ್.ಎಸ್. ನಂದೀಶ್, ನೊಬೆಲ್ ಪ್ರಶಸ್ತಿಯು ವಿದ್ಯಾರ್ಥಿನಿಯರ ಕಲಿಕಾ ಕೌಶಲ್ಯಕ್ಕೆ ಸ್ಪೂರ್ತಿಯಾಗಬೇಕೆಂಬುದನ್ನು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಟ್ಟು, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸ್ವಯಂ ಸೇವೆಯನ್ನು ತಿಳಿಸಿದರು. ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿ ವರ್ಷ ನಡೆಸುವ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿನಿಯರಲ್ಲಿನ ಅತ್ಯುನ್ನತ ಕೌಶಲ್ಯವನ್ನು ಬೆಳಕಿಗೆ ತರುವಲ್ಲಿ ಶಿಕ್ಷಕರ ಪರಿಶ್ರಮ ಹೆಚ್ಚಿನದಾಗಿ ಇರುತ್ತದೆ ಎಂದರು.

ಚಲನಚಿತ್ರ ನಟ ಮತ್ತು ಗಾಯಕ ಡಾ.ಸುಚೇತನ್ ರಂಗಸ್ವಾಮಿ ಮಾತನಾಡಿ, ಹೆಣ್ಣು ಅಬಲೆಯಲ್ಲ, ಸಬಲೆ ಎಂಬುದನ್ನು ಪ್ರಾಯೋಗಿಕವಾಗಿ ನಿರೂಪಿಸುವಲ್ಲಿ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು ಒಂದು ಜೀವಂತ ಉದಾಹರಣೆಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಚ್.ಡಿ. ತಿಪ್ಪೇಸ್ವಾಮಿ ಮಾತನಾಡಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಲಕ್ಷಾಂತರ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಕಾರಣೀಕರ್ತರಾಗಿದ್ದಾರೆ. ಅವರ ಈ ಮಹೋನ್ನತ ಕಾರ್ಯಕ್ಕೆ ನಾವೆಲ್ಲರೂ ಶ್ರಮಿಸಿ ಅವರಿಗೆ ಈ ಮೂಲಕ ಗೌರವ ಸೂಚಿಸಬೇಕು ಎಂದರು.

ಸಮಾರಂಭದಲ್ಲಿ ಸಂಸ್ಕೃತಿ ಸಂಚಾಲಕ ಬಿ.ಎಸ್. ಮಂಜುಳಾ, ಉಪನ್ಯಾಸಕ ಮುದ್ಲಾಪುರ ನಾಗೇಂದ್ರ, ಭೋಜರಾಜ್, ಎಂ. ನರೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment