ಭಾರತೀಯ ವಾದ್ಯಪ್ರಕಾರಗಳಲ್ಲಿ ತಬಲಾಕ್ಕೆ ಅಗ್ರಸ್ಥಾನ: ಡಾ.ಬಿ.ಕೆ.ಸುಂದರ್

ಬಳ್ಳಾರಿ, ಸೆ.4: ಭಾರತೀಯ ವಾದ್ಯಪ್ರಕಾರಗಳಲ್ಲಿ ನಾನಾ ರೀತಿಯ ವಾದ್ಯ ಪರಿಕರಗಳಿದ್ದರೂ ಅವುಗಳನ್ನು ಮೀರಿಸುವಂತಹ ವಾದ್ಯವೆಂದರೆ ತಬಲಾ. ಇದಕ್ಕೆ ಸಂಗೀತ ಕ್ಷೇತ್ರದಲ್ಲಿ ಅಗ್ರಸ್ಥಾನವಿದೆಂದು  ನಗರದ ಖ್ಯಾತ ವೈದ್ಯ ಡಾ.ಬಿ.ಕೆ.ಸುಂದರ್ ಅಭಿಪ್ರಾಯಪಟ್ಟರು.

ಅವರು ನಗರದ ಕನ್ನಡ ಭವನದಲ್ಲಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಆಯೋಜಿಸಿದ್ದ ತಬಲಾ ವಾದನ ತರಂಗ ಹಾಗೂ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಾದ್ಯ ಕಲಾವಿದರಿಗೆ ಇಂದು ಸಾಕ್ಷಟು ಬೇಡಿಕೆ ಇದ್ದು, ಪೋಷಕರು ತಮ್ಮ ಮಕ್ಕಳಿಗೆ ಈ ಕಲೆಯನ್ನು ಕಲಿಸಿ, ವೃತ್ತಿ ಕಲಾವಿದರನ್ನಾಗಿ ಮಾಡಬೇಕು. ಆ ನಿಟ್ಟಿನಲ್ಲಿ ಪ್ರೇರಣೆ ಮತ್ತು ಉತ್ತೇಜನ ನೀಡಿದಾಗ ಅವರು ರಾಷ್ಟ್ರಮಟ್ಟದ ಕಲಾವಿದರಾಗಿ ಹೊರಹೊಮ್ಮುತ್ತಾರೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರಿನ ಪ್ರಸಿದ್ಧ  ತಬಲಾ ಕಲಾವಿದ ಶ್ರೀವತ್ಸ ಕೌಲಗಿ. ಸಂಗೀತವು ಮನುಷ್ಯನ ಸಂಕುಚಿತತೆಯನ್ನು ದೂರ ಮಾಡುತ್ತದೆ. ಸಂಗೀತದಲ್ಲಿ ಪರಿಶ್ರಮದ ಮೂಲಕ ಜನರ ಮನಸ್ಸನ್ನು ಸೆಳೆಯುವುದಲ್ಲದೆ ಉನ್ನತ ಸಾಧನೆಯನ್ನು ಮಾಡಬಹುದು. ಪೋಷಕರು ತಮ್ಮ ಮಕ್ಕಳಿಗೆ ಯಾವುದಾದರೊಂದು ಕಲೆಯನ್ನು ಕಲಿಸುವ ಮೂಲಕ ಅವರ ಪ್ರತಿಭೆಗೆ ನೀರೆರೆದು ಪೋಷಿಸಬೇಕಿದೆಂದರು.

ಹಿರಿಯ ಪತ್ರಕರ್ತ ಅಹಿರಾಜ್ ಸಂಗೀತ ಕಲಿಯಲು ಯಾವುದೇ ರೀತಿಯ ವಯಸ್ಸಿನ ಭೇದವಿಲ್ಲ. ದೇಶೀ ಕಲೆಗಳಲ್ಲಿ ತಬಲಾ ವಾದ್ಯಕ್ಕೆ ಬಹಳ ಮಹತ್ವವಿದೆ. ಕನ್ನಡ ಸಾಹಿತ್ಯದ ವಚನ- ಕೀರ್ತನೆಗಳನ್ನು ಸಂಗೀತಗಾರರು ಹಾಡಿದಾಗಲೂ ತಬಲಾದ ವಾದ್ಯದಿಂದ ಆ ಸಾಹಿತ್ಯ ಶ್ರೋತೃಗಳ ಮನ ಮುಟ್ಟುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ  ನಿವೃತ್ತ ಆರಕ್ಷಕ ಅಧಿಕಾರಿ ಹುಸೇನ್ ಸಾಬ್,  ಕಸಾಪ ಉಪಾಧ್ಯಕ್ಷ ಬಾದಾಮಿ ಶಿವಲಿಂಗನಾಯಕ್, ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ, ಶಿವಾನಂದ ಕತಕನಹಳ್ಳಿ ಸೇರಿದಂತೆ ನೂರಾರು ಜನ ಸಂಗೀತ ಆಸಕ್ತರು ಹಾಗೂ ವಿದ್ಯಾರ್ಥಿಗಳು  ಭಾಗವಹಿಸಿದ್ದರು.

ಆರಂಭದಲ್ಲಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿವಪ್ರಕಾಶ್ ವಸ್ತ್ರದ ಸ್ವಾಗತಿಸಿ, ನಿರೂಪಿಸಿದರು. ಪವಮಾನ ಅರಳಿಕಟ್ಟಿ ವಂದಿಸಿದರು.

Leave a Comment