‘ಭಾರತೀಯ ಲಲಿತ ಕಲೆಗಳಿಂದ ಚಿತ್ತ ಶುದ್ಧಿ’

ಮಂಗಳೂರು, ಸೆ.೮- ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಜೊತೆಯಲ್ಲಿ ಸಾಂಸ್ಕೃತಿಕ ಕಲಾ ಪ್ರಕಾರಗಳ ಸೊಬಗನ್ನು ಆಸ್ವಾದಿಸಿದಾಗ ವಿದ್ಯಾರ್ಥಿಗಳ ಮನೋಕೌಶಲ ವಿಕಸನವಾಗುತ್ತದೆ. ಭಾರತೀಯ ಲಲಿತಕಲಾ ಪ್ರಕಾರಗಳು ನಮ್ಮ ಚಿತ್ತ ಶುದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತವೆ ಎಂಬುದಾಗಿ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಣಾಧಿಕಾರಿಗಳಾದ ಡಾ| ಶರಭೇಂದ್ರ ಸ್ವಾಮಿ ಅಭಿಪ್ರಾಯ ಪಟ್ಟರು.
ಇವರು ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಶಾರದಾ ಮಹೋತ್ಸವದ ಅಂಗವಾಗಿ ನಡೆದ ದ.ಕ. ಹಾಗೂ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕಲೆ ಮತ್ತು ಸಂಸ್ಕೃತಿಯ ಆಸಕ್ತಿ ವಿದ್ಯಾರ್ಥಿಗಳ ಅರಿವಿಗೆ ಬರಬೇಕಾದರೆ ಇಂತಹ ಸಾಂಸ್ಕೃತಿಕ ಸ್ಪರ್ಧೆಗಳಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಅಂಕ ಗಳಿಕೆಗೆ ಸೀಮಿತವಾಗದೆ, ಈ ದೇಶದ ಸಾಂಸ್ಕೃತಿಯ ಬಗ್ಗೆ ಅರಿವನ್ನು ತಮ್ಮದಾಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತಾನಾಡಿದ ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ| ಎಂ.ಬಿ ಪುರಾಣಿಕ್ ಮಾತನಾಡಿ ಸಾಂಸ್ಕೃತಿಕ ಸ್ಪರ್ಧೆಗಳು ಈ ದೇಶದ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರೇರಣೆ ನೀಡುವ ಸಲುವಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಹೆಚ್ಚಿನ ಲಾಭ ಪಡೆಯುವಂತಾಗಲಿ ಎಂದು ನುಡಿದರು. ಶಾರದಾ ವಿದ್ಯಾಸಂಸ್ಥೆಯ ಟ್ರಸ್ಟಿಗಳಾದ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಸ್ಪರ್ಧಾ ಮನೋಭಾವದಿಂದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ವಿಕಸನವಾಗುತ್ತದೆ ಎಂದು ಹೇಳಿದರು. ಶಾರದಾ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಮಹಾಬಲೇಶ್ವರ ಭಟ್ ಪ್ರಾಸ್ತಾವಿಕ ಮಾತನ್ನಾಡಿದರು. ಸಂಯೋಜಕರಾದ ಪ್ರಕಾಶ್ ನಾಯ್ಕ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ವೈಭವ್ ಕಾರ್ಯಕ್ರಮ ನಿರೂಪಿಸಿ, ಜ್ಯೋತ್ನ್ಸಾ ಅತಿಥಿಗಳನ್ನು ಪರಿಚಯಿಸಿ, ವಿದ್ಯಾರ್ಥಿ ಮಧುಸೂಧನ ಪೈ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಚಿತ್ರಕಲೆ, ಕರ್ನಾಟಕ ರಾಷ್ಟ್ರೀಯ ಸಂಗೀತ, ಸಂಸ್ಕೃತ ರಸಪ್ರಶ್ನೆ, ಭರತನಾಟ್ಯ, ಭಜನೆ, ರಂಗೋಲಿ, ದೇಶ ಭಕ್ತಿಗೀತೆ ಹಾಗೂ ಏಕವ್ಯಕ್ತಿ ಯಕ್ಷಗಾನ ಸಾಂಸ್ಕೃತಿಕ ಸ್ಪರ್ಧೆಗಳು ಜರಗಿದವು. ಒಟ್ಟು ೨೬ ಪದವಿ ಪೂರ್ವ ವಿದ್ಯಾಲಯಗಳಿಂದ ಸುಮಾರು ೫೫೦ ವಿದ್ಯಾರ್ಥಿಗಳು ಸ್ಪರ್ಧಾರ್ಥಿಗಳಾಗಿ ಭಾಗವಹಿಸಿದರು.

Leave a Comment