ಭಾರತೀಯ ಪಾದ್ರಿಗೆ ಚೂರಿ : ಆಸ್ಟ್ರೇಲಿಯಾದಲ್ಲಿ ಜನಾಂಗೀಯ ಹಲ್ಲೆ

ಮೆಲ್ಬೋರ್ನ್ (ಆಸ್ಟ್ರೇಲಿಯಾ), ಮಾ. ೨೦- ಭಾರತೀಯನಾಗಿದ್ದರಿಂದ ಚರ್ಚ್‌ನಲ್ಲಿ ಪ್ರಾರ್ಥನೆ ನಡೆಸಲು ಅರ್ಹತೆಯಿಲ್ಲ ಎಂದು ಕೂಗಿಕೊಂಡ ವ್ಯಕ್ತಿಯೊಬ್ಬ, ಭಾರತೀಯ ಮೂಲದ ಪಾದ್ರಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದು ಆಸ್ಟ್ರೇಲಿಯಾದಲ್ಲಿ ನಡೆದ ಮತ್ತೊಂದು ಜನಾಂಗೀಯ ದಾಳಿ ಎನ್ನಲಾಗಿದೆ. ಪಾದ್ರಿಯ ಕತ್ತಿಗೆ ಚೂರಿ ಹಾಕಿ ಈ ದಾಳಿ ಮಾಡಲಾಗಿದೆ.
ಟಾಮಿ ಕಲತೂರ್ ಮಾಥ್ಯೂ (48) ಎಂಬ ಪಾದ್ರಿಯನ್ನು ಚರ್ಚಿನ ವೇದಿಕೆಯ ಮೇಲೆ ಚಾಕುವಿನಿಂದ ಇರಿಯಲಾಗಿದೆ.
ಫಾಕ್‌ನರ್ ಎಂಬಲ್ಲಿನ ಸೇಂಟ್ ಮಾಥ್ಯೂಸ್ ಪರಿಶ್ ಚರ್ಚ್‌ನಲ್ಲಿ ಇಟಾಲಿಯನ್ ಭಾಷೆಯಲ್ಲಿ ಪ್ರಾರ್ಥನೆ ಆರಂಭಕ್ಕೂ ಮುನ್ನ ಈ ಕೃತ್ಯ ಎಸಗಲಾಗಿದೆ.
ದಾಳಿಗೆ ಮುನ್ನ ಆಪಾದಿತ ಪಾದ್ರಿಯನ್ನು ಭಾರತೀಯನೆಂದು ನಿಂದಿಸಿ ಆತ ಹಿಂದೂ ಅಥವಾ ಮುಸಲ್ಮಾನನೇ ಹೊರತು ಕ್ರೈಸ್ತನಲ್ಲ. ಆದ್ದರಿಂದ ಆದ ಮಾಸ್ ನಡೆಸಲು ಅನರ್ಹ ಎಂದು ಕೂಗಿಕೊಂ‌ಡನೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾ‌ಡಿವೆ.
ಚರ್ಚಿನ ಹಿಂದೆ ಚಲನವಲನ ಹೆಜ್ಜೆ, ಕೂಗಾಟ ನ‌ಡೆದಾಗ ಮತ್ತೊಬ್ಬ ಪಾದ್ರಿ ನನ್ನ ಕುತ್ತಿಗೆ ನೋ‌ಡಿಕೊಳ್ಳಲು ಹೇಳಿದಾಗ ತನ್ನನ್ನು ಇರಿದಿರುವುದು ಗೊತ್ತಾಯಿತೆಂದು ಭಾರತೀಯ ಪಾದ್ರಿ ಹೇಳಿದ್ದಾರೆ.
ಉದ್ದೇಶ ಪೂರ್ವಕವಾಗಿ ಗಂಭೀರವಾಗಿ ಗಾಯಗೊಳಿಸಿದ್ದಕ್ಕೆ 72 ವರ್ಷದ ವೃದ್ಧನನ್ನು ಬಂಧಿಸಲಾಗಿದೆ. ಆತನಿಗೆ ಜಾಮೀನು ನೀಡಿ ಜೂನ್ 13 ರಂದು ವಿಚಾರಣೆಗೆ ಬರುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸೂಚಿಸಲಾಗಿದೆ.
ಇದೆಲ್ಲೋ ಒಂದು ಅಪರೂಪದ ಪ್ರಕರಣವಾಗಿದ್ದು, ಬೇರೆಯವರಿಗೆ ಆತನಿಂದ ತೊಂದರೆಯಿದೆ ಎಂದು ನಂಬಲು ಯಾವುದೇ ಆಧಾರವಿಲ್ಲ ಎಂದು ತನಿಖಾ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಭಯಾನಕವಾಗಿದೆ ಎಂದು ಮೆಲ್ಬೋರ್ನ್ ಕ್ಯಾಥೋಲಿಕ್ ಆರ್ಚ್ ಡಿಯೋಸ್‌ನ ವಕ್ತಾರ ಶೇನ್ ಹೀಲಿ ಹೇಳಿದ್ದಾರೆ.
ಯಾರನ್ನೇ ಆಗಲಿ ಈ ರೀತಿ ನೋಡಬಾರದು. ಜನರನ್ನು ಈ ರೀತಿ ನಡೆಸಿಕೊಳ್ಳಬಾರದು. ಆತ ತನ್ನ ಚರ್ಚ್‌ಗೆ ಬಂದ ಭಕ್ತರಿಗಾಗಿ ಅದ್ಭುತವಾದ ಕೆಲಸ ಮಾಡುತ್ತಿದ್ದ. ಎಷ್ಟೋ ಕ್ಯಾಥೋಲಿಕ್ ಪಾದ್ರಿಗಳು ಬಹುದೊಡ್ಡ ಕೆಲಸ ಮಾಡುತ್ತಿದ್ದಾರೆ. ಅವರನ್ನು ಹೀಗೆ ನಡೆಸಿಕೊಳ್ಳುವುದು ಹೀನಾಯ ಕೃತ್ಯ ಎಂದೂ ಅವರು ಹೇಳಿದ್ದಾರೆ.
ಪಾತ್ರಿ ಮಾಥ್ಯೂನ ಕತ್ತಿಗೆ ಗಾಯವಾಗಿದ್ದು, ಅವರು ದೃಢವಾಗಿದ್ದಾರೆಂದು ನಾರ್ತರ್ನ್ ಆಸ್ಪತ್ರೆ ಹೇಳಿದೆ. ಸದ್ಯದಲ್ಲೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಎಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುವುದೆಂದೂ ಆಸ್ಪತ್ರೆ ತಿಳಿಸಿದೆ.

Leave a Comment