ಭಾರತೀಯ ಆಹಾರ ನಿಗಮ : ಉಗ್ರಾಣ ಅಧಿಕಾರಿಗಳ ನಿರ್ಲಕ್ಷ್ಯ

ಅಕ್ಕಪಕ್ಕದ ನಿವಾಸಿಗಳಿಗೆ ಹುಳ ಕಾಟ – ಬಾಧೆ
ರಾಯಚೂರು.ಜು.12- ಭಾರತೀಯ ಆಹಾರ ನಿಗಮ (ಎಫ್‌ಸಿಎ) ದ ಅಕ್ಕಪಕ್ಕದ ನಿವಾಸಿಗಳು ಹುಳಗಳ ಹಾವಳಿಗೆ ಬೇಸತ್ತು ಹೋಗುವಂತೆ ಮಾಡಿದೆ.
ಕಳೆದ ಅನೇಕ ವರ್ಷಗಳಿಂದ ಎಫ್‌ಸಿಎ ಗೋಧಾಮಿನ ಅಕ್ಕಪಕ್ಕದ ನಿವಾಸಿಗಳಿಗೆ ವಿಶೇಷವಾಗಿ ಮಳೆಗಾಲದಲ್ಲಿ ಅಕ್ಕಿ ಹುಳಗಳ ಕಾಟದಿಂದ ಅಕ್ಕಪಕ್ಕದಲ್ಲಿ ವಾಸಿಸುವುದೇ ಕಷ್ಟ ಎನ್ನುವಂತಹ ಜಿಗುಪ್ಸೆ ಮೂಡಿಸಿದೆ. ಗೋದಾಮಿನಲ್ಲಿ ಆಹಾರ ಪದಾರ್ಥ ಸಂಗ್ರಹ ಪ್ರಕ್ರಿಯೆ ಸಮರ್ಪಕ ನಿರ್ವಹಿಸದ ಕಾರಣ ಲಕ್ಷಾಂತರ ಸಂಖ್ಯೆಯ ಹುಳಗಳು ಗೋದಾಮಿನೊಂದಿಗೆ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಸಾರ್ವಜನಿಕರ ಮಾನಸಿಕ ನೆಮ್ಮದಿ ಹಾಳು ಮಾಡಿದೆ.
ಒಂದು ಬೋಗಸೆಯಷ್ಟು ಅಕ್ಕಿಯಲ್ಲಿ ಅಷ್ಟೇ ಪ್ರಮಾಣದ ಹುಳಗಳ ಕಾಟದಿಂದ ಸ್ಥಳೀಯರು ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಿ ಕಿವಿ, ಮೂಗು ಸೇರಿದಂತೆ ಹಾಸಿಗೆಗಳಲ್ಲಿ ಒಕ್ಕು ನೆಮ್ಮದಿಯಿಂದ ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲವಾಗಿಸಿವೆ. ಹುಳ ನಿಯಂತ್ರಣಕ್ಕೆ ಸಂಬಂಧಿಸಿ, ಪದೇ ಪದೇ ಒತ್ತಾಯ ಮಾಡುತ್ತಿದ್ದರೂ, ಅತ್ತ ಎಫ್‌ಸಿಎ ಅಧಿಕಾರಿಗಳಿಂದ ಇತ್ತ ನಗರಸಭೆಯಿಂದ ಯಾವುದೇ ಪರಿಹಾರ ಒದಗಿಸದ ಕಾರಣ ಸಾರ್ವಜನಿಕರು ಮಳೆಗಾಲ ಬಂದರೇ ಹುಳಗಳ ಕಾಟಕ್ಕೆ ಪರಿತಪಿಸಬೇಕಾಗುತ್ತದೆ.
ವಾತಾವರಣ ಕೊಂಚ ತಂಪಾದರೇ ಸಾಕು ಈ ಹುಳ ಸೈನಿಕರಂತೆ ದಾಳಿ ಇಟ್ಟು ನಿತ್ಯ ಬದುಕಿನ ನೆಮ್ಮದಿ ಕಿತ್ತುಕೊಳ್ಳುವ ದೃಷ್ಟ ಶಕ್ತಿಗಳಾಗಿವೆ. ಹುಳ ಹಾವಳಿಯಿಂದ ಬೇಸತ್ತ ಜನ ಸಾಮಾಜಿಕ ಜಾಲತಾಣದಲ್ಲಿ ಅಕ್ಕಿ ಹುಳಗಳ ಹಾವಳಿ ದಾರುಣ ಸಾರ್ವಜನಿಕರು ಸೇರಿದಂತೆ ಅಧಿಕಾರಿಗಳಿಗೆ ತಿಳಿಸಿದರೂ, ಇಲ್ಲಿವರೆಗೂ ಯಾವುದೇ ಉಪಯೋಗವಾಗಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಆಹಾರ ಪದಾರ್ಥಗಳಲ್ಲಿ ಸೇರಿ ಹೋಗಿರುವ ಈ ಅಕ್ಕಿ ಹುಳದಿಂದ ನೆಮ್ಮದಿ ಜೀವನ ಮಾಡುವುದಾದರೂ ಹೇಗೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದಾರೆ. ಇನ್ನಾದರೂ, ಎಫ್‌ಸಿಎ ಮತ್ತು ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಹುಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವರೇ?

Leave a Comment