‘ಭಾರತದ ಹಿರಿಮೆ ಉಳಿಸುವ ಕೆಲಸವಾಗಲಿ’

ಮೂಡಬಿದ್ರೆ, ಜ.೧೩- ಭಾರತವನ್ನು ಕಟ್ಟುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದು ನಾಗಾಲ್ಯಾಂಡಿನ ರಾಜ್ಯಪಾಲ ಪಿ.ಬಿ.ಆಚಾರ್ಯ ತಿಳಿಸಿದ್ದಾರೆ. ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಜ.೧೪ರವರೆಗೆ ನಿನ್ನೆ ನಡೆಯಲಿರುವ ೨೪ನೆ ವರ್ಷದ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಅವರು ಇಂದು ಉದ್ಘಾಟಿಸಿ ನಂತರ ಪದ್ಮಭೂಷಣ ಪಂಡಿತ್ ರಾಜನ್, ಸಾಜನ್ ಮಿಶ್ರಾರಿಗೆ ಆಳ್ವಾಸ್ ವಿರಾಸತ್ ೨೦೧೮ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಾಂಸ್ಕೃತಿಕ ಉತ್ಸವದ ಮೂಲಕ ಜನರ ಮನಸ್ಸುನ್ನು ಕಟ್ಟು ಕೆಲಸ ಆಳ್ವಾಸ್ ವಿರಾಸತ್ ಮೂಲಕ ನಡೆಯುತ್ತಿದೆ. ಭಾರತ ಜಗತ್ತಿನಲ್ಲಿಯೇ ಸಮೃದ್ಧವಾದ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿರುವ ದೇಶವಾಗಿದೆ. ಈ ಹಿರಿಮೆಯನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮ ಪಠ್ಯದಲ್ಲಿ ಈ ಬಗ್ಗೆ ವಿಷಯಗಳನ್ನು ಸೇರ್ಪಡೆಗೊಳಿಸಬೇಕಾಗಿದೆ. ದೇಶದ ಎಲ್ಲಾ ರಾಜ್ಯಗಳನ್ನು ಸಮಾನತೆಯಿಂದ ನೋಡಬೇಕಾಗಿದೆ. ಆದರೆ ಬೇರೆ ಬೇರೆ ಕಾರಣಗಳಿಂದ ನಿರ್ಲಕ್ಷ್ಯಕ್ಕೆ ಈಡಾಗಿರುವ ಈಶಾನ್ಯ ಭಾರತದ ಅಭಿವೃದ್ಧಿಯ ಬಗ್ಗೆ ದೇಶದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿದಿರುವ ರಾಜ್ಯಗಳು, ಅಲ್ಲಿನ ಶಿಕ್ಷಣ ಸಂಸ್ಥೆಗಳು ಗಮನಹರಿಸಿ ಅಲ್ಲಿನ ಅಭಿವೃದ್ಧಿಗೆ ಸಹಾಯ ನೀಡಬೇಕಾಗಿದೆ. ಶೈಕ್ಷಣಿಕ ಕೇಂದ್ರಗಳು ಅಭಿವೃದ್ಧಿಯ ಕೇಂದ್ರಗಳು ಆಗಬೇಕಾಗಿದೆ. ವಿದ್ಯಾರ್ಥಿಗಳು ಕೇಂದ್ರದ ರಾಜ್ಯದ ಅಭಿವೃದ್ಧಿ ಯೋಜನೆಗಳ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಆಚಾರ್ಯ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡುತ್ತಾ,ದ್ವೇಷ ಬಿಟ್ಟು ದೇಶ ಕಟ್ಟುವ ಕೆಲಸ ಆಗಬೇಕಾಗಿದೆ. ದೇಶದ ಎಲ್ಲಾ ಜನರು ಸಮಾನತೆಯೊಂದಿಗೆ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕತೆ ಸಂಸ್ಕೃತಿಯೂ ಇಂದು ಸಾಧನ. ಮೂಡುಬಿದಿರೆ ದೇಶದ ಸಾಂಸ್ಕೃತಿಕ ರಾಜಧಾನಿಯಾಗಿ ಪರಿವರ್ತನೆಯಾಗುತ್ತಿದೆ ಎಂದು ಶುಭಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಅಧ್ಯಕ್ಷ ಡಾ.ಮೋಹನ್ ಆಳ್ವ ಅತಿಥಿಗಳನ್ನು ಸ್ವಾಗತಿಸಿ, ಜನಸಾಮಾನ್ಯರಿಗೆ ದೇಶದ ಉನ್ನತವಾದ ಸಾಂಸ್ಕೃತಿಕ ಹಿರಿಮೆಯನ್ನು ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ , ಸಾಂಸಕೃತಿಕ ವಿನಿಮಯದ ನಿಟ್ಟಿನಲ್ಲಿ ಕಳೆದ ೨೪ ವರ್ಷಗಳಿಂದ ಉತ್ತಮವಾದ ಫಲಿತಾಂಶ ದೊರೆತಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ನಾಗಾಲ್ಯಾಂಡ್‌ನ ರಾಜ್ಯಪಾಲದ ಪತ್ನಿ ಕವಿತಾ ಆಚಾರ್ಯ ,ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಆಭಯ ಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಯೆನೆಪೊಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞ, ಬರೊಡ ತುಳು ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ, ಹರೀಶ್ ಶೆಟ್ಟಿ ಐಕಳ ಮುಂಬೈ, ಕಡಂದಲೆ ಸುರೇಶ್ ಭಂಡಾರಿ, ಗುರ್ಮೆ ಸುರೇಶ್ ಶೆಟ್ಟಿ , ದೇವಿ ಪ್ರಸಾದ್ ಶೆಟ್ಟಿ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Comment