ಭಾರತದ ವಿರುದ್ಧ ಸೇಡಿಗೆ ಉಗ್ರರು ಸಂಚು

ನವದೆಹಲಿ, ಏ. ೧೬: ಪಾಕಿಸ್ತಾನ್ ಮೂಲದ ಜಾಗತಿಕ ಭಯೋತ್ಪಾದಕ ಸಂಘಟನೆ ಜೈಷ್ ಏ ಮಹಮ್ಮದ್ ಇನ್ನಷ್ಟು ಸಕ್ರಿಯವಾಗಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ತನ್ನ ಹೊಸ ಮುಂಚೂಣಿ ನೆಲೆಗಳನ್ನು ಸ್ಥಾಪಿಸುತ್ತಾ ಸಾಗಿದ್ದು, ಜಮ್ಮು ಕಾಶ್ಮೀರದೊಳಕ್ಕೆ ಭಯೋತ್ಪಾದಕರನ್ನು ನುಗ್ಗಿಸುವ ಸಾಧ್ಯತೆಗಳಿವೆ ಎಂದು ಭಯೋತ್ಪಾದನಾ ನಿಗ್ರಹ ಅಧಿಕಾರಿಗಳು ಹಾಗೂ ಜಮ್ಮು-ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಗಳು ಸುಳಿವು ನೀಡಿದ್ದಾರೆ. ಏಕೆಂದರೆ ಭಾರತದ ಭದ್ರತಾ ಪಡೆಗಳು ಕಣಿವೆಯಲ್ಲಿನ ಜೇಷ್ ಸಂಘಟನೆಯ ಬಹುತೇಕ ನಾಯಕರನ್ನು ಹೊಡೆದುರುಳಿಸಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.

ಜೆಇಎಂ ಮುಖ್ಯಸ್ಥ ಮಸೂದ್ ಅಜರ್‌ನ ಸೋದರಳಿಯ ಹಾಗೂ ಫೆಬ್ರವರಿಯಲ್ಲಿ ಪುಲ್ವಾಮ ದಾಳಿಯಲ್ಲಿ ಕಂಡುಬಂದಿದ್ದ ಮೊಹಮ್ಮದ್ ಉಮೈರ್ ಬಹುಷಃ ಸತ್ತಿರಬಹುದು ಅಥವಾ ಪಾಕಿಸ್ತಾನಕ್ಕೆ ಹಿಂದಿರುಗಿರಬಹುದು ಎಂದು ಅವರು ತಿಳಿಸಿದ್ದಾರೆ.

ಇದೀಗ ಜೈಷ್ ಎ ಮಹಮ್ಮದ್ ಮತ್ತೆ ತನ್ನ ಹೊಸ ಮುಂಚೂಣಿ ನೆಲೆಗಳನ್ನು ಸ್ಥಾಪಿಸುತ್ತಿರುವುದಕ್ಕೆ, ಅದು ತನ್ನ ಬಲ ಹೆಚ್ಚಿಸಿಕೊಳ್ಳುವ ಹಾಗೂ ರಾಜ್ಯದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಬೇಕೆಂಬ ಹಂಬಲವೇ ಕಾರಣವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಭಯೋತ್ಪಾದನಾ ನಿಗ್ರಹ ಹಾಗೂ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Leave a Comment