ಭಾರತಕ್ಕೆ ಒಲಿದ ಟಿ-20 ಸರಣಿ : ರೋಹಿತ್ ಭರ್ಜರಿ ಶತಕ

ವೆಸ್ಟರ್ನ್, ಜು.೯- ಬಿರುಸಿನ ಆಟಗಾರ ರೋಹಿತ್ ಶರ್ಮ ಅವರ ಭರ್ಜರಿ ಶತಕ ಇಂಗ್ಲೆಂಡ್ ವಿರುದ್ಧ ನಡೆದ ಟಿ-೨೦ ಕ್ರಿಕೆಟ್ ಅಂತಿಮ ಪಂದ್ಯದಲ್ಲಿ ೭ ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ೨-೧ ರ ಅಂತರದಿಂದ ಸರಣಿಯನ್ನು ಕೊಹ್ಲಿ ಪಡೆ ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ೨೦ ಓವರ್ ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೯೮ ರನ್ ಗಳ ಬೃಹತ್ ಮೊತ್ತ ಪೇರಿಸಿತು. ಜೇಸನ್ ರಾಯ್ ೬೭, ಜೋಸ್ ಬಟ್ಲರ್ ೩೪, ಹಾಗೂ ಅಲೆಕ್ಸ್ ಹೇಲ್ಸ್ ೩೦ ರನ್ ಗಳಿಸಿ ಬಿರುಸಿನ ಮೊತ್ತ ಗಳಿಸಲು ಪ್ರಮುಖ ಪಾತ್ರವಹಿಸಿದರು.

ಈ ಸವಾಲಿನ ಬೆನ್ನು ಹತ್ತಿದ ಭಾರತ ೧೮.೪ ಓವರ್ ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೨೦೧ ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತ್ತು. ಆರಂಭದಲ್ಲೇ ಶಿಖರ್ ಧವನ್ ಮತ್ತು ಕೆ.ಎಲ್,ರಾಹುಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಆಡಲು ಬಂದ ರೋಹಿತ್ ಶರ್ಮಾ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಧೂಳಿ ಪಟ್ಟ ಮಾಡಿದರು.

ರೋಹಿತ್ ಶರ್ಮಾ ೧೧ ಬೌಂಡರಿ ಹಾಗೂ ೫ ಆಕರ್ಷಕ ಸಿಕ್ಸರ್ ನೆರವಿನಿಂದ ಅಜೇಯ ೧೦೦ ರನ್ ಗಳಿಸಿದರು. ಅಲ್ಲದೇ ನಾಯಕ ಕೊಹ್ಲಿ ಜತೆ ೩ನೇ ವಿಕೆಟ್‌ಗೆ ೮೯ ರನ್ ಸೇರಿಸಿದರು.

ಕೊಹ್ಲಿ ೪೩ ರನ್ ಗಳಿಸಿ ನಿರ್ಗಮಿಸಿದ್ದ ನಂತರ ಆಡಲು ಬಂದ ಹಾರ್ಧಿಕ್ ಪಾಂಡ್ಯ ಔಟಾಗದೇ ಬಿರುಸಿನ ೩೩ ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಹಾರ್ಧಿಕ್ ಪಾಂಡ್ಯ ೪ ವಿಕೆಟ್ ಪಡೆಯುವ ಮೂಲಕ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲೂ ಮಿಂಚಿದರು.

೨ನೇ ಪಂದ್ಯದಲ್ಲಿ ಇಂಗ್ಲೆಂಡ್ ಜಯಗಳಿಸಿದರಿಂದ ಉಭಯ ತಂಡಗಳ ಪಾಲಿಗೆ ೩ನೇ ಪಂದ್ಯ ತೀವ್ರ ಕುತೂಹಲ ಕೆರಳಿಸಿತು.

ಅಂತಿಮವಾಗಿ ೨-೧ರ ಅಂತರದಿಂದ ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿತು. ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

Leave a Comment