ಭಾನುವಾರ ಬಳ್ಳಾರಿಯಲ್ಲಿ ನವೋದಯ ಆರೋಗ್ಯ ಮಂದಿರ, ಚಾರಿಟೆಬಲ್ ಸೊಸೈಟಿ ಉದ್ಘಾಟನೆ

ಬಳ್ಳಾರಿ, ಏ.21:ಜಿಲ್ಲೆಯ ಚಿಕ್ಕಜೋಗಿಹಳ್ಳಿಯ ಜವಾಹರ ನವೋದಯ ವಿದ್ಯಾಲಯದ (ಜೆ.ಎನ್.ವಿ.ಸಿ) ಹಳೇ ವಿದ್ಯಾರ್ಥಿಗಳು ಸಂಘವನ್ನು ರಚಿಸಿಕೊಂಡು ಸ್ಥಾಪಿಸಿಕೊಂಡಿರುವ ನವೋದಯ ಚಾರಿಟೆಬಲ್ ಸೊಸೈಟಿಯ ಹಾಗೂ ನವೋದಯ ಆರೋಗ್ಯ ಮಂದಿರದ ಉದ್ಘಾಟನಾ ಸಮಾರಂಭವು ಏಪ್ರಿಲ್ 23ರಂದು ಭಾನುವಾರ ಬೆಳಿಗ್ಗೆ ನಡೆಯಲಿದೆ.

ನಗರದ ಕಪ್ಪಗಲ್ಲು ರಸ್ತೆಯಲ್ಲಿರುವ ‘ಶ್ರೀಹರಿ ಪ್ಲಾಜಾ’ದಲ್ಲಿ ಸೊಸೈಟಿಯನ್ನು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರುಗಳಾದ ಡಾ|| ಸಂಗನಬಸವ ಮಹಾಸ್ವಾಮಿಗಳು ಹಾಗೂ ಆರೋಗ್ಯ ಮಂದಿರವನ್ನು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ.ವಿ.ರಾಜೇಂದ್ರ ಅವರು ಏ.23ರಂದು ಬೆಳಿಗ್ಗೆ 11.30ಕ್ಕೆ ಉದ್ಘಾಟಿಸಲಿದ್ದಾರೆ.

ಸೊಸೈಟಿಯ ಕಾರ್ಯದರ್ಶಿ ಡಾ|| ಜಂಬನಗೌಡ ಎಸ್.ಪಿ. ಹಾಗೂ ಡಾ|| ಮಂಜುನಾಥ್, ಅಶೋಕ್ ಅವರಿಂದು ಪೂರ್ವಾಹ್ನ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಘಾಟನೆಯ ನಂತರ ವೇದಿಕೆ ಕಾರ್ಯಕ್ರಮವು ಭಾನುವಾರ ಮಧ್ಯಾಹ್ನ 12 ಗಂಟೆಗೆ, ಗಾಂಧಿನಗರದಲ್ಲಿರುವ ಎ.ಎಸ್.ಎಂ ಕಾಲೇಜ್ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರೂ ಆಗಿರುವ, ಪ್ರಮುಖ ಗ್ರಾನೈಟ್ ಉದ್ಯಮಿ ಡಾ||ಡಿ.ಎಲ್.ರಮೇಶ್ ಗೋಪಾಲ್, ಈ ಕಾಲೇಜಿನ ಪ್ರಾಚಾರ್ಯ ಡಾ|| ಎಂ.ಪಂಪಾಪತಿ, ವಿಶೇಷ ಆಹ್ವಾನಿತರಾಗಿ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಎಂ.ವಿಶ್ವನಾಥಂ ಅವರು ಉಪಸ್ಥಿತರಿರಲಿದ್ದಾರೆ ಎಂದರು.

ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅನೇಕ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರಗಳಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದೇವೆ, ಕಳೆದ ಎರಡು ವರ್ಷಗಳಲ್ಲಿ ‘ಸ್ವಚ್ಛ’ ಭಾರತ-ಶ್ರೇಷ್ಠ ಭಾರತ’ ಕಾರ್ಯಕ್ರಮದಿಂದ ಸ್ಫೂರ್ತಿ ಹೊಂದಿ, ನಗರದ ತಾಳೂರು ರಸ್ತೆಯಲ್ಲಿನ ಹರಿಶ್ಚಂದ್ರ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ದುರಸ್ತಿ, ಹೊಸ ಮೋಟಾರ್ ವಿತರಣೆ ಹಾಗೂ ಶಾಲೆಯಲ್ಲಿ ನೈರ್ಮಲ್ಯ-ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡಿದ್ದೇವೆ ಎಂದರು.

ಬಳ್ಳಾರಿ ತಾಲ್ಲೂಕಿನ ಶ್ರೀಧರಗಡ್ಡೆ, ಕೂಡ್ಲಿಗಿ ತಾಲ್ಲೂಕಿನ ಕಾನಾಹೊಸಳ್ಳಿ, ಹಾಗೂ ಸಂಡೂರು ತಾಲ್ಲೂಕಿನ ಭುಜಂಗ ನಗರ ಗ್ರಾಮಗಳಲ್ಲಿ 2016-17ನೇ ಸಾಲಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ 3,500ಕ್ಕೂ ಅಧಿಕ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ ಮತ್ತು ಔಷಧಿ ವಿತರಣೆ ಮಾಡಲಾಗಿದೆ ಎಂದು ಡಾ|| ಜಂಬನಗೌಡ ತಿಳಿಸಿದರು.

ಅಂತೆಯೇ ಜಗತ್ತಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಗಿಡ-ಮರಗಳನ್ನೇ ಬೆಳೆಸುವ ಅಗತ್ಯತೆ, ಅನಿವಾರ್ಯತೆಯನ್ನು ಮನಗಂಡು, ಶ್ರೀಧರಗಡ್ಡೆ ಗ್ರಾಮದ ಬಯಲು ಜಾಗದಲ್ಲಿ, ಗ್ರಾಮ ಪಂಚಾಯ್ತಿಯ ಸಹಕಾರದೊಂದಿಗೆ ‘ನಮೋದಯ ಉದ್ಯಾನವನ’ವನ್ನು ರೂಪಿಸಿ ಅದನ್ನು ನಿರ್ವಹಿಸುತ್ತಿದ್ದೇವೆ. ಅಲ್ಲದೇ ಗ್ರಾಮದಲ್ಲಿ 120 ಗಿಡಗಳನ್ನು ನೆಟ್ಟು, ಇಂದಿಗೂ ನಿರ್ವಹಣೆಯ ಹೊಣೆ ಹೊತ್ತಿದ್ದೇವೆ ಎಂದು ನುಡಿದರು.

ಈ ಎಲ್ಲಾ ಕಾರ್ಯಕ್ರಮಗಳ ಜೊತೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಬೇಕೆನ್ನುವ ಸದುದ್ದೇಶದೊಂದಿಗೆ ನಮೋದಯ ‘ಚಾರಿಟೆಬಲ್ ಸೊಸೈಟಿ’ ಪ್ರಾರಂಭಿಸುತ್ತಿದ್ದು ಇದರ ಅಂಗವಾಗಿ ಬಡವರಿಗೆ ಕನಿಷ್ಠ ಸೇವಾ ಶುಲ್ಕದಲ್ಲಿ ಆರೋಗ್ಯ ಸೇವೆ ನೀಡಲು ನವೋದಯ ಆರೋಗ್ಯ ಮಂದಿರವನ್ನು ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹತ್ತಿರ ಪ್ರಾರಂಭಿಸುತ್ತಿದ್ದೇವೆ ಎಂದು ವಿವರಿಸಿದರು.

ಆರೋಗ್ಯ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವೈದ್ಯಕೀಯ ಸೇವಾ ಸೌಲಭ್ಯಗಳು ಲಭ್ಯವಿರುತ್ತವೆ. ವಿಶೇಷ ತಜ್ಞ ವೈದ್ಯರ ಸೇವೆಯು ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಲಭ್ಯವಿರುತ್ತದೆ ಎಂದು ತಿಳಿಸಿದರು.

Leave a Comment