ಭಾನುವಾರದಂದು ಬಳ್ಳಾರಿಯಲ್ಲಿ ಶಿಕ್ಷಕರ ನೇಮಕಾತಿಗಾಗಿ ಉದ್ಯೋಗ ಮೇಳ

ಬಳ್ಳಾರಿ, ಏ.21:ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ, ಧಾರವಾಡ ವತಿಯಿಂದ ಏಪ್ರಿಲ್ 23ರಂದು ಭಾನುವಾರ ಬಳ್ಳಾರಿಯಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ನೇಮಕಾತಿಗಾಗಿ ಇದನ್ನು ಹಮ್ಮಿಕೊಳ್ಳಲಾಗಿದೆ.

ಹೈದ್ರಾಬಾದ್ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳ ನೇಮಕಾತಿಗಾಗಿ ನಗರದ ಮಹಮ್ಮದೀಯ ಮಹಿಳಾ ಬಿ.ಎಡ್.ಕಾಲೇಜ್ ನ (ಕೌಲ್ ಬಜಾರ್ ಮೊದಲನೇ ಗೇಟ್ ಬಳಿ) ಆವರಣದಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ. ಈಗಾಗಲೇ 1,500ಕ್ಕೂ ಹೆಚ್ಚು ಜನರು ಮೇಳದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಂಡಿದ್ದಾರೆ ಹಾಗೂ ಹೈ.ಕ.ಪ್ರದೇಶದ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಇದರಲ್ಲಿ ಭಾಗವಹಿಸುತ್ತಿವೆ, ಎಂದು ಸಮಿತಿಯ ರಾಜ್ಯಾಧ್ಯಕ್ಷರಾದ ನಾಗರಾಜ ಹೆಚ್. ಲಿಂಗಸೂಗೂರು ಅವರು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿಂದು ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರಿಯನ್ನು ನೆಚ್ಚಿಕೊಂಡು ಲಕ್ಷಾಂತರ ಜನ ಶಿಕ್ಷಕರ ಆರ್ಹತೆ ಪಡೆದ ಉದ್ಯೋಗಾಕಾಂಕ್ಷಿಗಳು ಸರಿಯಾದ ಉದ್ಯೋಗವಿಲ್ಲದೇ ಪರದಾಡುವಂತಾಗಿದೆ. ಸರ್ಕಾರಿ ಉದ್ಯೋಗ ಮಾತ್ರ ಸೂಕ್ತ ಎಂಬ ಮನೋಭಾವನೆಯಿಂದ ಸಾವಿರಾರು ಪ್ರತಿಭಾವಂತ ಅನುಭವಿ ಶಿಕ್ಷಕರು ಉದ್ಯೋಗವಿಲ್ಲದೇ ಮನೆಯಲ್ಲಿಯೇ ಕುಳಿತುಕೊಂಡಿದ್ದಾರೆ. ಇಂತಹವರು ಉದ್ಯೋಗ ಪಡೆಯಬೇಕು ಎಂಬುವ ಸದುದ್ದೇಶದೊಂದಿಗೆ, ಒಂದೇ ವೇದಿಕೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ಶಿಕ್ಷಕರಾಗಲು ಅರ್ಹತೆ ಇರುವ ಅಭ್ಯರ್ಥಿಗಳನ್ನು ಮುಖಾಮುಖಿಯಾಗಿಸಲು, ತಮಗಿಷ್ಟವಾದಂತಹ ಶಾಲೆಗಳನ್ನು, ಶಿಕ್ಷಕರನ್ನು ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲು ಈ ‘ಮೇಳ’ದ ಮೂಲಕ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.

ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ. 1500ಕ್ಕೂ ಹೆಚ್ಚು ಅಭ್ಯರ್ಥಿಗಳೂ ಸಹ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ನಾಗರಾಜ್ ತಿಳಿಸಿದರು.

Leave a Comment