ಭರಚುಕ್ಕಿ ಜಲಪಾತ ಭೋರ್ಗರೆಯುತ್ತಿದೆ : ಪ್ರವಾಸಿಗರ ದೌಡು

ಚಾಮರಾಜನಗರ, ಆ.25: ಕೆಆರ್ ‌ಎಸ್ ಹಾಗೂ ಕಬಿನಿ ಜಲಾಶಯದಿಂದ ತಮಿಳುನಾಡಿನತ್ತ ನೀರು ಹರಿದು ಹೋಗುತ್ತಿರುವ ಕಾರಣ ಶಿವನ ಸಮುದ್ರ ಬಳಿಯ ಭರಚುಕ್ಕಿ ಜಲಪಾತ ಧುಮ್ಮಿಕ್ಕುತ್ತಿದೆ. ಈ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಪ್ರವಾಸಿಗರ ದಂಡು ದೌಡಾಯಿಸುತ್ತಿದೆ.
ಸಾಮಾನ್ಯವಾಗಿ ಉತ್ತಮ ಮಳೆಯಾಗಿ ಅಧಿಕ ಪ್ರಮಾಣದಲ್ಲಿ ಕಬಿನಿ ಮತ್ತು ಕೆಆರ್ ‌ಎಸ್ ಜಲಾಶಯಕ್ಕೆ ನೀರು ಹರಿದು ಬಂದಾಗ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗೆ ಹರಿದು ಬರುವ ನೀರು ಶಿವನಸಮುದ್ರ ಬಳಿಯ ಭರಚುಕ್ಕಿಯ ಹೆಬ್ಬಂಡೆ ಮೇಲೆ ಧುಮ್ಮಿಕ್ಕಿ ಹರಿದು ಸುಂದರ ದೃಶ್ಯವನ್ನು ತೆರದಿಡುತ್ತದೆ.
ಹೀಗಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿಲ್ಲ. ಆದರೂ ಇದೀಗ ತಮಿಳುನಾಡಿಗೆ ನೀರು ಬಿಟ್ಟಿರುವ ಕಾರಣ ಒಂದಷ್ಟು ನೀರು ನದಿಯಲ್ಲಿ ಹರಿಯುತ್ತಿದ್ದು ಇದರಿಂದ ಭರಚುಕ್ಕಿ ಜಲಪಾತ ಭೋರ್ಗರೆದು ಪ್ರವಾಸಿಗರನ್ನು ಸೆಳೆಯುತ್ತಿದೆ.
ಈ ನಡುವೆ ಧುಮ್ಮಿಕ್ಕುವ ಜಲಪಾತವನ್ನು ಹತ್ತಿರದಿಂದ ನೋಡಿ ಮನಸ್ಸನ್ನು ತಣಿಸಿಕೊಂಡು ತೆರಳದೆ ಕೆಲವರು ಜಲಪಾತದ ಕೆಳಭಾಗಕ್ಕೆ ಹೋಗಲು ಪ್ರಯತ್ನ ಪಡುತ್ತಾರೆ. ಇದು ಅಪಾಯಕಾರಿ. ಇಲ್ಲಿ ಈಗಾಗಲೇ ಹಲವರು ಪ್ರಾಣ ಕಳೆದುಕೊಂಡ ನಿದರ್ಶನವಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವೇಶವನ್ನು ನಿಷೇಧಿಸಲಾಗಿದೆ. ಜತೆಗೆ ಅರಣ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇನ್ನೊಂದೆಡೆ ಶಿವನಸಮುದ್ರದಲ್ಲಿ ತೆಪ್ಪದ ಮೂಲಕ ವಿಹಾರ ನಡೆಸಲಾಗುತ್ತಿದ್ದು, ಇದು ಅಪಾಯಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಕೆಲವರು ತೆಪ್ಪಗಳನ್ನಿಟ್ಟುಕೊಂಡು ಪ್ರವಾಸಿಗರನ್ನು ಸುತ್ತು ಹೊಡೆಸುತ್ತಾರೆ. ಇಲ್ಲಿ ಅನಾಹುತ ಸಂಭವಿಸಿದರೆ ರಕ್ಷಣೆಗೆ ಯಾವುದೇ ಸೌಲಭ್ಯಗಳಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಮಹಾನಗರದ ಚಿಂತೆ ಬಿಡಿ, ಮಳವಳ್ಳಿ ಕಡೆ ರಸ್ತೆ ಹಿಡಿ ರಜಾ ದಿನಗಳಲ್ಲಿ ಇಲ್ಲಿಗೆ ದೂರದ ಊರಿನಿಂದ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಕೆಲವರು ನೀರಿನಲ್ಲಿ ಚೆಲ್ಲಾಟವಾಡುತ್ತಾರೆ. ಜತೆಗೆ ಯಾವುದೇ ಸುರಕ್ಷಾ ಸಾಧನಗಳಿಲ್ಲ ಎಂಬುದು ತಿಳಿದಿದ್ದರೂ ಕೂಡ ತೆಪ್ಪದಲ್ಲಿ ವಿಹಾರ ನಡೆಸಲು ಮುಂದಾಗುತ್ತಾರೆ. ಇದು ಗೊತ್ತಿದ್ದರೂ ಇದನ್ನು ತಡೆಗಟ್ಟುವ ಕಾರ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗದಿರುವುದು ಅಚ್ಚರಿಗೆ ಕಾರಣವಾಗಿದೆ.

Leave a Comment