ಭಯೋತ್ಪಾದನೆ ನಿಗ್ರಹ ಬ್ರಿಕ್ಸ್ ಶೃಂಗ ಸಭೆಯಲ್ಲಿ ನಿರ್ಧಾರ

ನವದೆಹಲಿ, ನ ೧೩- ವಿಶ್ವದ ಐದು ಆರ್ಥಿಕ ಬಲಾಢ್ಯ ರಾಷ್ಟ್ರಗಳನ್ನು ಒಳಗೊಂಡ ಬ್ರಿಕ್ಸ್ ಶೃಂಗ ಸಭೆಯಲ್ಲಿ ಪ್ರಮುಖ ಕ್ಷೇತ್ರಗಳಾದ ಡಿಜಿಟಲ್ ಎಕನಾಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವೃದ್ಧಿ ಹಾಗೂ ಭಯೋತ್ಪಾದನಾ ನಿಗ್ರಹ ಕಾರ್ಯಯೋಜನೆ ಬಲಪಡಿಸುವ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾಗವಹಿಸಲು ಬ್ರೇಜಿಲ್‌ಗೆ ತೆರಳುವ ಮುನ್ನ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರ, ರಾಷ್ಟ್ರಗಳ ನಡುವಿನ ದ್ವಿ ಪಕ್ಷೀಯ ಸಂಬಂಧಗಳ ವೃದ್ಧಿ ಜೊತೆಗೆ ಭಯೋತ್ಪಾದನೆ ನಿಗ್ರಹಕ್ಕೆ ಈ ಶೃಂಗದಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು ಎಂದಿದ್ದಾರೆ. “ನಮ್ಮ ವಾಣಿಜ್ಯ ವ್ಯವಹಾರ ಮತ್ತು ಕೈಗಾರಿಕೆ ಯೋಜನೆ ಬ್ರಿಕ್ಸ್ ರಾಷ್ಟ್ರಗಳಲ್ಲಿನ ಸಂಬಂಧಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಬ್ರಿಕ್ ರಾಷ್ಟ್ರಗಳ ಶೃಂಗಸಭೆ ಸಂದರ್ಭದಲ್ಲಿಯೇ ಬ್ರೇಜಿಲ್ ಅಧ್ಯಕ್ಷ ಜೈರ್ ಬೋಸೋನಾರೋ ರೊಂದಿಗೆ ದ್ವಿ ಪಕ್ಷೀಯ ಸಂಬಂಧಗಳ ವೃದ್ಧಿ ಕುರಿತಂತೆ ಚರ್ಚೆ ನಡೆಸಲಾಗುವುದು ಹಾಗೆಯೇ ಚೀನಾ ಅಧ್ಯಕ್ಷ ಜಿನ್ ಪಿಂಗ್ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳ ನಾಯಕರೊಂದಿಗೆ ದ್ವಿ ಪಕ್ಷೀಯ ಚರ್ಚೆ ನಡೆಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬ್ರೇಜಿಲ್‌ನಲ್ಲಿ ಇದೇ ತಿಂಗಳ ೧೩-೧೪ ರವರೆಗೆ ಬ್ರಿಕ್ಸ್ ರಾಷ್ಟ್ರಗಳ ಶೃಂಗ ಸಭೆ ನಡೆಯುತ್ತಿದೆ. ಈ ಶೃಂಗದಲ್ಲಿ ಬ್ರಿಕ್ಸ್ ರಾಷ್ಟ್ರಗಳಾದ ಬ್ರೇಜಿಲ್, ರಷ್ಯಾ, ಇಂಡಿಯಾ, ಚೈನಾ ಮತ್ತು ದಕ್ಷಿಣ ಆಫ್ರೀಕಾಗಳ ನಾಯಕರು ಭಾಗವಹಿಸಿದ್ದಾರೆ. ಬ್ರಿಕ್ಸ್ ಕೂಟದಲ್ಲಿರುವ ಐದು ಪ್ರಮುಖ ರಾಷ್ಟ್ರಗಳು ವಿಶ್ವದ ಶೇ. ೪೨ ರಷ್ಟು ಜನಸಂಖ್ಯೆಯನ್ನು ಹೊಂದಿವೆ. ಹಾಗೆಯೇ ಶೇ. ೨೩ ರಷ್ಟು ಒಟ್ಟು ತಲಾ ಆದಾಯವನ್ನು ಹೊಂದಿದೆ.

Leave a Comment