ಭದ್ರಾವತಿಯ ಇಬ್ಬರು ಕಳ್ಳರ ಬಂಧನ 3 ಲಕ್ಷ ರೂ ಮೌಲ್ಯದ 32 ಮೊಬೈಲ್ ಫೋನ್ ವಶ

ಬಳ್ಳಾರಿ, ಜು.17: ನಗರದ ಬ್ರೂಸ್ ಪೇಟೆ ಪೊಲೀಸರು ಇಬ್ಬರು ಮೊಬೈಲ್ ಫೋನ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ 3 ಲಕ್ಷ ರೂಪಾಯಿಗಳ ಮೊಲ್ಯದ 32 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.

ಕಳೆದ ತಿಂಗಳ (ಜೂನ್) 26ರಂದು ಮಧ್ಯರಾತ್ರಿ ನಗರದ ನಟರಾಜ್ ಟಾಕೀಜ್ ಎದುರುಗಡೆ ಇರುವ, ಮುನಿಸಿಪಲ್ ಕಾಂಪ್ಲೆಕ್ಸ್ ನಲ್ಲಿ (ನಗರಪಾಲಿಕೆ ವಾಣಿಜ್ಯ ಮಳಿಗೆಯಲ್ಲಿ) ಇರುವ ಮಾಕ್ಸ್ ಮೋರ್ ಕಮ್ಯುನಿಕೇಷನ್ಸ್ ಮೊಬೈಲ್ ಶಾಪ್ ನಲ್ಲಿ ಲಕ್ಷಾಂತರ ರೂಪಾಯಿಗಳ ಮೌಲ್ಯದ ಮೊಬೈಲ್ ಫೋನ್ ಗಳನ್ನು ಕಳುವು ಮಾಡಲಾಗಿತ್ತು.

ಯಾರೋ ಕಳ್ಳರು ಈ ಮೊಬೈಲ್ ಫೋನ್ ಅಂಗಡಿಯ ಹಿಂಭಾಗದಲ್ಲಿ ಏರ್ ವೆಂಟಿಲೇಟರ್ ಕಿಟಕಿಯ ರಾಡ್ ಗಳನ್ನು ಮುರಿದು ಒಳಹೊಕ್ಕು ಶಾಪ್ ನಲ್ಲಿದ್ದ ವಿವಿಧ ಕಂಪನಿಗಳ 4.58 ಲಕ್ಷ ರೂ.ಗಳ ಮೌಲ್ಯದ 41 ಮೊಬೈಲ್ ಫೋನ್ ಗಳನ್ನು ಕಳುವು ಮಾಡಿ ಪರಾರಿಯಾಗಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಈ ಬಗ್ಗೆ ಕೇಸ್ ದಾಖಲಿಸಿಕೊಂಡಿದ್ದ ಬ್ರೂಸ್ ಪೇಟೆ ಪೊಲೀಸರು ಸಮಗ್ರ ತನಿಖೆ ನಡೆಸಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಕ್ಕೆ ಸೇರಿದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 3 ಲಕ್ಷ ರೂಗಳ ಮೌಲ್ಯದ 32 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್.ಪಿ ಚೇತನ್ ತಿಳಿಸಿದ್ದಾರೆ.

ಜಿಲ್ಲಾ ಎಸ್.ಪಿ. ಆರ್.ಚೇತನ್ ಮಾರ್ಗದರ್ಶನದಲ್ಲಿ ಬಳ್ಳಾರಿ ಡಿವೈಎಸ್ಪಿ ಟಿ.ವಿ.ಸುರೇಶ್ ನೇತೃತ್ವದಲ್ಲಿ ರಚಿಸಲಾದ ಎರಡು ಪೊಲೀಸ್ ತನಿಖಾ ತಂಡಗಳು ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಭದ್ರಾವತಿಯ ಆರ್.ರಾಜೇಶ್ ಹಾಗೂ ಮುರುಗನ್ ಎಂಬುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬ್ರೂಸ್ ಪೇಟೆ ಇನ್ಸ್ ಪೆಕ್ಟರ್ ಶ್ರೀಧರ್ ದೊಡ್ಡಿ, ಪಿಎಸ್ಐ ಹುಸೇನ್ ಸಾಬ್, ಎ.ಎಸ್.ಐ ರಾಜ್ ಕುಮಾರ್, ಹೆಚ್.ಸಿ.ಗಳಾದ ಮಲ್ಲಿಕಾರ್ಜುನ್, ಸಿಂಗ್ರಯ್ಯ, ಪಿಸಿಗಳಾದ ಮಂಜುನಾಥ್, ಮಾರೇಶ್, ಕರಿಬಸಪ್ಪ, ಮೆಹಬೂಬ್ ಅವರು ಆರೋಪಿಗಳಾದ ಭದ್ರಾವತಿಯ ಆರ್.ರಾಜೇಶ್ (20) ಅಲಿಯಾಸ್ ಕಾಡು ಮನುಷ್ಯ ಹಾಗೂ ಮುರುಗನ್ (21) ಅಲಿಯಾಸ್ ಚಿನ್ನು ಎಂಬುವ ಇಬ್ಬರನ್ನು ಬಂಧಿಸಿ, ಅವರಿಂದ 3 ಲಕ್ಷ ರೂ ಬೆಲೆಬಾಳುವ 32 ಸೆಲ್ ಫೋನ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಇನ್ನುಳಿದ ಮೊಬೈಲ್ ಫೋನ್ ಗಳನ್ನು ಕೂಡಾ ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ರೂಸ್ ಪೇಟೆ ಪೊಲೀಸರ ಈ ತನಿಖಾ ಕಾರ್ಯವನ್ನು ಜಿಲ್ಲಾ ಎಸ್.ಪಿ. ಚೇತನ್, ಎ.ಎಸ್.ಪಿ ಝಂಡೇಕರ್ ಅವರು ಶ್ಲಾಘಿಸಿದ್ದಾರೆ.

Leave a Comment