ಭದ್ರತಾ ಮಂಡಲಿ ಸಭೆ ಕರೆಯಲು ಪಾಕ್ ಆಗ್ರಹ

ಇಸ್ಲಾಮಾಬಾದ್, ಆ ೧೪- ಕಾಶ್ಮೀರ ವಿಚಾರದಲ್ಲಿ ಭಾರತ ಕೈಗೊಂಡಿರುವ ನಿರ್ಧಾರದ ಬಗ್ಗೆ ಚರ್ಚಿಸಲು ಶೀಘ್ರದಲ್ಲಿಯೇ ಅಧಿವೇಶನ ಕರೆಯಬೇಕೆಂದು ಪಾಕಿಸ್ತಾನ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯನ್ನು ಆಗ್ರಹಿಸಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ ೩೭೦ ನೇ ವಿಧಿ ರದ್ದು ಮತ್ತು ಜಮ್ಮು ಕಾಶ್ಮೀರವನ್ನು ಪುನರ್ ವಿಂಗಡನೆ ಮಾಡಿರುವ ಭಾರತದ ನಿರ್ಧಾರವನ್ನು ಕುರಿತಂತೆ ಚರ್ಚಿಸಲು ಅಧಿವೇಶನ ಕರೆಯಬೇಕೆಂದು ಆಗ್ರಹಿಸಿ ಪಾಕಿಸ್ತಾನ ವಿದೇಶಾಂಗ ಸಚಿವ ಮೆಹಮೂದ್ ಖುರೇಶಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಜೊಹನ್ನ ರೊನೆಕಾ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
“ಜಮ್ಮು-ಕಾಶ್ಮೀರ ವಿಷಯದಲ್ಲಿ ಭಾರತದ ಆಕ್ರಮಣಕಾರಿ ನಡೆಯಿಂದ ಜಮ್ಮು-ಕಾಶ್ಮೀರದಲ್ಲಿ ಉದ್ಭವವಾಗಿರುವ ಸ್ಥಿತಿಗತಿ ಕುರಿತಂತೆ ಚರ್ಚಿಸಲು ತುರ್ತಾಗಿ ಅಧಿವೇಶನ ಕರೆಯಲು ತಮ್ಮನ್ನು ಕೋರಲು ಇಚ್ಛಿಸುತ್ತೇನೆ.” ಎಂದು ಖುರೇಶಿ ಪತ್ರದಲ್ಲಿ ಹೇಳಿದ್ದಾರೆ.
ಕಾಶ್ಮೀರ ವಿಷಯದಲ್ಲಿ ಚರ್ಚಿಸಲು ಅಧಿವೇಶನ ಕರೆಯಬೇಕೆಂಬ ಪಾಕಿಸ್ತಾನದ ಆಗ್ರಹಕ್ಕೆ ಭದ್ರತಾ ಮಂಡಳಿಯಲ್ಲಿಯ ೧೫ ಮಂದಿ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೋ ಕಾದು ನೋಡ ಬೇಕಿದೆ.
“ಅಧಿವೇಶನ ಕೋರಿ ಪಾಕಿಸ್ತಾನದ ಪತ್ರ ತಲುಪಿದೆ. ಈ ಕುರಿತಂತೆ ಚರ್ಚಿಸಲಾಗುವುದು ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಪೋಲೆಂಡ್ ವಿದೇಶಾಂಗ ಸಚಿವ ಜಾಸೆಕ್ ಝಪುಟೋವಿಜ್ ಹೇಳಿದ್ದಾರೆ. ಪೋಲೆಂಡ್ ಭದ್ರತಾ ಮಂಡಳಿಯ ಅಧ್ಯಕ್ಷೀಯ ಸ್ಥಾನ ಹೊಂದಿದೆ.

Leave a Comment