ಭದ್ರತಾಪಡೆ ಗುಂಡಿಗೆ ಮೂವರು ಉಗ್ರರು ಬಲಿ

ಶ್ರೀನಗರ, ಆ. ೧೩- ಜಮ್ಮು-ಕಾಶ್ಮೀರದ ಸೋಫಿಯಾನ್ ವಲಯದಲ್ಲಿ ಉಗ್ರರ ವಿರುದ್ಧ ಭದ್ರತಾಪಡೆಗಳು ನಡೆಸಿದ ವ್ಯಾಪಾಕ ಕಾರ್ಯಾಚರಣೆಯಲ್ಲಿ ಮೂರು ಮಂದಿ ಉಗ್ರರು ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.

ಕಳೆದ ರಾತ್ರಿಯಿಂದ ಪ್ರಾರಂಭವಾಗಿದ್ದ ಈ ವ್ಯಾಪಕ ಕಾರ್ಯಾಚರಣೆಯಲ್ಲಿ ಇಂದು ಮೂರು ಮಂದಿ ಉಗ್ರರು ಬಲಿಯಾಗಿದ್ದಾರೆ. ನಿನ್ನೆ ಈ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು ಹಾಗೂ ಮೂರು ಮಂದಿ ಯೋಧರು ಗಾಯಗೊಂಡಿದ್ದರು. ಕಳೆದ ರಾತ್ರಿಯಿಂದ ಪ್ರಾರಂಭವಾಗಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ಇಂದು ಕೊನೆಗೊಂಡಿದೆ.

ದಕ್ಷಿಣ ಕಾಶ್ಮೀರದ ಸೋಫಿಯಾನ್ ಜಿಲ್ಲೆಯ ಜೈನಾಪೋರ ಭಾಗಕ್ಕೆ ಮೂರು ಮಂದಿ ಉಗ್ರರು ನುಸುಳಿರುವ ಕುರಿತಂತೆ ಬೇಹುಗಾರಿಕಾ ಮೂಲಗಳ ಸುಳಿವಿನ ಆಧಾರದಲ್ಲಿ ಆ ಇಡೀ ಪ್ರದೇಶವನ್ನು ಸುತ್ತುವರೆದಿದ್ದ ಭದ್ರತಾಪಡೆಗಳು, ತೀವ್ರ ಕಾರ್ಯಾಚರಣೆಗಿಳಿದಿದ್ದವು. ಈ ಸಂದರ್ಭದಲ್ಲಿ ಉಗ್ರರು ಮತ್ತು ಭದ್ರತಾಪಡೆಗಳ ನಡುವೆ ನಡೆದ ಭಾರಿ ಗುಂಡಿನ ದಾಳಿಯಲ್ಲಿ ಮೂರು ಮಂದಿ ಉಗ್ರರು ಮೃತಪಟ್ಟಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮತ್ತು ಮೂರು ಯೋಧರು ಗಾಯಗೊಂಡಿದ್ದಾರೆ ಎಂದು ಸೋಫಿಯಾನ್ ಜಿಲ್ಲೆಯ ಡಿಜಿಪಿ ಎಸ್.ವಿ ವೈದ್ ಹೇಳಿದ್ದಾರೆ.

ಗಾಯಗೊಂಡ ಯೋಧರನ್ನು 92 ಮೂಲಸೇನಾ ಶಿಬಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ರಕ್ಷಣಾ ಮೂಲಗಳು ಹೇಳಿವೆ.

Leave a Comment