ಭತ್ತ ಖರೀದಿಗೆ ಡಿ.10ರಂದು ನೋಂದಣಿ ಆರಂಭ

ಮೈಸೂರು.ಡಿ.7- ರೈತರು ಬೆಳೆದ ಭತ್ತವನ್ನು ಖರೀದಿಸಲು ರಾಜ್ಯ ಸರ್ಕಾರವು ಯೋಜನೆಯನ್ನು ಜಾರಿಗೊಳಿಸಿದ್ದು, ಅದರಂತೆ ಈ ತಿಂಗಳ 10 ರಿಂದ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ಆರಂಭಗೊಳ್ಳಲಿದೆ ಎಂದು ಮೈಸೂರು ಜಿ.ಪಂ.ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಜ್ಯೋತಿ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಯವರ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರೈತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ರಾಜ್ಯ ಸರ್ಕಾರವು ಹಾಲಿ ರೈತರು ಬೆಳೆದಿರುವ ಭತ್ತವನ್ನು ರೈಸ್‍ಮಿಲ್‍ಗಳ ಮೂಲಕ ನೇರವಾಗಿ ಖರೀದಿಸಲಿದೆ. ಸಣ್ಣ ಮತ್ತು ಮಧ್ಯಮ ವರ್ಗದವರ ಕೃಷಿಕರು ಬೆಳೆದ ಭತ್ತದ ಬೆಳೆಗೆ ಮೊದಲ ಆದ್ಯತೆ ನೀಡಲಾಗುವುದು. ಈ ದಿಸೆಯಲ್ಲಿ ಇದೇ ತಿಂಗಳ 10ರಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನೋಂದಣಿ ಕಛೇರಿಗಳನ್ನು ತೆರೆಯಲಾಗಿದ್ದು, ಇವುಗಳು 2019ರ ಮಾರ್ಚ್ ಅಂತ್ಯದವರೆಗೂ ರೈತರ ನೋಂದಣಿ ಹಾಗೂ ಭತ್ತ ಖರೀದಿ ಇವೆರಡೂ ಕಾರ್ಯಗಳನ್ನೂ ನಿರ್ವಹಿಸಲಿವೆ ಎಂದರು.
ಈ ಸಂಧರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ಭತ್ತದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿ ಪಡಿಸುವುದು, ದಲ್ಲಾಳಿಗಳ ಹಾವಳಿ ತಪ್ಪಿಸುವುದು ಸೇರಿದಂತೆ ರೈತರ ಇನ್ನಿತರ ಪ್ರಮುಖ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರು ಟಾಸ್ಕ್ ಫೋರ್ಸ್ ಮೂಲಕ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು. ನಾವು ಪ್ರಧಾನಿ ಮೋದಿಯವರನ್ನು ನೇರವಾಗಿ ಭೇಟಿ ಮಾಡಲು ಅವಕಾಶವಿಲ್ಲದ ಕಾರಣ ಜಿಲ್ಲಾಧಿಕಾರಿಗಳು ಈ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿದರು.

Leave a Comment