ಭಟ್ ವಿರುದ್ಧ ಹೇಳಿಕೆ ರೈ ಮೇಲೆ ಕೇಸ್

ಮಂಗಳೂರು, ಜೂ.೧೯- ತನ್ನ ಬೆಂಬಲಿಗರೊಂದಿಗೆ, ಎಸ್.ಪಿ. ಮುಂದೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ರಿಯಲ್ ಎಸ್ಟೇಟ್ ವ್ಯಾಪಾರಿ ಮತ್ತು ಕೋಮುಗಲಭೆಗೆ ಕಾರಣಕರ್ತ ಎಂದು ಹೇಳಿಕೆ ನೀಡಿದ್ದ ಸಚಿವ ರಮಾನಾಥ ರೈ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಅಮ್ಟೂರ್ ಸಚಿವರ ವಿರುದ್ಧ ದೂರು ನೀಡಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಶನಿವಾರ ರಾತ್ರಿ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ರಮಾನಾಥ ರೈ ಅವರು ಜಿಲ್ಲಾ ಎಸ್ಪಿ ಭೂಷಣ್ ಜಿ ಬೊರಸೆಯವರನ್ನು ಪಕ್ಷದ ಕಾರ್ಯಕರ್ತರ ನಡುವೆ ಕೂರಿಸಿ ಪ್ರಭಾಕರ್ ಭಟ್ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದ್ದರು. ಅಲ್ಲದೆ ಪ್ರಭಾಕರ್ ಭಟ್‌ರನ್ನು ಏಕವಚನದಲ್ಲಿ ನಿಂದಿಸಿದ್ದರು.

ಕಲ್ಲಡ್ಕ ಗಲಭೆಯ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ ಪೊಲೀಸರ ಮೇಲೆ ಕಿಡಿಕಾರಿದ್ದರು. ಶನಿವಾರ ರಾತ್ರಿ ಜಿಲ್ಲಾ ಎಸ್‌ಪಿಯನ್ನು ಬಂಟ್ವಾಳ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡ ಸಚಿವ ರೈ ಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡು ಯಾರೇ ದೂರು ಕೊಟ್ಟರು ಕ್ರಮಕೈಗೊಳ್ಳಬೇಕು. ಮಾತ್ರವಲ್ಲ ಆಎರೆಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಯಾರೇ ದೂರು ನೀಡಿದರೂ ಪ್ರಕರಕಣ ದಾಖಲಿಸಿಕೊಂಡು ಆತನನ್ನು ಬಂಧಿಸಬೇಕು. ಬಂಧನ ಬಳಿಕ ಆತನ ಪವರ್ ಏನೆಂಬುದು ಗೊತ್ತಾಗುತ್ತದೆ. ಇದೇನು ಮಂಡ್ಯ ಅಲ್ಲ ಇದು ಇಂಡಿಯಾ ಎಂದು ಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

’ಸಂಪುಟದಿಂದ ರೈ ಕೈಬಿಡಿ’

ಮಂಗಳೂರು, ಜೂ.೧೯- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗೆ ಪ್ರೇರಣೆ ನೀಡುತ್ತಿರುವ ರಮಾನಾಥ ರೈ ತಕ್ಷಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅವರನ್ನು ಮುಖ್ಯಮಂತ್ರಿಯವರೇ ಸಂಪುಟದಿಂದ ಕೈಬಿಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಒತ್ತಾಯಿಸಿದ್ದಾರೆ.

ಸಚಿವ ರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಬಂಟ್ವಾಳದ ನಿರೀಕ್ಷಣಾ ಮಂದಿರಕ್ಕೆ ಕರೆಸಿ ಪಕ್ಷದ ಮುಖಂಡರ ನಡುವೆ ಅವಮಾನ ಮಾಡಿದ್ದಾರೆ. ಹಿಂದೂ ಸಂಘಟನೆ ಹಾಗೂ ಬಿಜೆಪಿ ಮುಖಂಡರನ್ನು ಬಂಧಿಸುವಂತೆ ಒತ್ತಡ ಹೇರಿದ್ದಾರೆ. ಇದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಶೋಭೆ ತರುವ ವಿಚಾರವಲ್ಲ ಎಂದು ನಿನ್ನೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೊಲೀಸ್ ಇಲಾಖೆಯನ್ನು ಕೈಯೊಳಗೆ ಇಟ್ಟುಕೊಂಡು ಗೂಂಡಾಗಿರಿ ನಡೆಸುವುದು ಕಾಂಗ್ರೆಸ್ ಸಂಸ್ಕೃತಿ. ಕಾಂಗ್ರೆಸ್ ಪೊಲೀಸ್ ಇಲಾಖೆ ಮೂಲಕ ಚುನಾವಣೆ ತಯಾರಿ ಆರಂಭಿಸಿದೆ. ಇಲಾಖೆ ಅಧಿಕಾರಿಗಳು ಹಾಗೂ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ಮತ ಪಡೆಯಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೋಮುಗಲಭೆ ನಡೆಯುತ್ತಿದೆ. ೨೦೦೮-೨೦೧೩ರ ತನಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲ ಎಂದರು.

ಬಿಜೆಪಿ ಮುಖಂಡರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿ, ದೇವದಾಸ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.

Leave a Comment