ಭಗವಂತನಿಗೆ ಸಮರ್ಪಣೆಯಿಂದ ಮಾನವ ಬದುಕು ಸಾರ್ಥಕತೆ ಸಾಧ್ಯ

ಧಾರವಾಡ,ಫೆ.11- ಸರ್ವಸ್ವನ್ನು ಭಗವಂತನಿಗೆ ಅರ್ಪಿಸುವುದರಿಂದ ಮಾತ್ರ ಮಾನವನ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಇಲ್ಲಿನ ವಿಶ್ವಚೇತನ ಎಜ್ಯುಕೇಶನ್ ಸೊಸೈಟಿ ಚೇರಮನ್ ಡಾ.ಸರ್.ಆಯ್. ಎ.ಪಿಂಜಾರ ಹೇಳಿದರು.
ರವಿವಾರ ನಗರದ ಹೊರವಲಯದ ಶಿರಡಿ ನಗರ ಬಡಾವಣೆಯಲ್ಲಿ ನಾಗರಿಕರ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಾಯಿಬಾಬಾ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು  ಮಾತನಾಡಿದರು.
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನು ಪಡೆಯಲು ಹಂಬಲಿಸುವುದರಿಂದ ನೆಮ್ಮದಿಯಿಂದ ವಂಚಿತನಾಗುತ್ತಾನೆ. ಅಲ್ಲದೇ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಭಗವಂತನ ಅಣತಿ ಇಲ್ಲದೇ ಏನೂ ಘಟಿಸಲಾರದು. ಹೀಗಾಗಿ ತನಗಿರುವ ಎಲ್ಲವೂ ದೇವರ ಕರುಣೆ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಮತ್ತು ಸಕಲವನ್ನೂ ದೇವರಿಗೆ ಅರ್ಪಣೆ ಮಾಡುವ ಭಾವ ಮೂಡಿದಾಗ ನೆಮ್ಮದಿ ಸಿಗುತ್ತದೆ ಎಂದರು.
ಬಡಾವಣೆಯ ನಾಗರಿಕರು ಸೇರಿ ಸಾಯಿಬಾಬಾ ಮಂದಿರ ನಿರ್ಮಾಣಕ್ಕೆ ಮುಂದಾಗಿರುವುದು ಸಂತೋಷದ ಸಂಗತಿ. ಬಡಾವಣೆಯ ಎಲ್ಲರೂ ಪರಸ್ಪರ ಪ್ರೀತಿಯಿಂದ ಬದುಕಲು ಮಂದಿರ ಕಾರಣವಾಗಲಿದೆ. ತಾವೂ ಕೂಡಾ ಮಂದಿರಕ್ಕೆ ಅಗತ್ಯ ಸಹಾಯ ಒದಗಿಸುವುದಾಗಿ ಡಾ.ಪಿಂಜಾರ ಭರವಸೆ ನೀಡಿದರು.
ಹಿರಿಯರಾದ ಎಸ್.ಎಚ್.ಹೊನವಾಡಮಠ, ವಿ.ಜಿ.ಪೋಳ, ಜ್ಯೋತಿ ಹೊನವಾಡಮಠ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಡಾ.ಸರ್.ಆಯ್. ಎ.ಪಿಂಜಾರ ಅವರನ್ನು ಬಡಾವಣೆಯ ನಾಗರಿಕರವತಿಯಿಂದ ಸನ್ಮಾನಿಸಲಾಯಿತು.
ಸಿ.ಬಿ.ಕುರಟ್ಟಿ, ಎಂ.ಎನ್.ರಾಮಣ್ಣವರ, ಸಂಗಮೇಶ ಹಡಪದ, ಸಮೀರ ಹುನ್ನೂರ, ಎಂ.ಕೆ. ಉಪ್ಪಾರ, ವೆಂಕಪ್ಪ ದಾಸರ, ಮಹೇಶ ಧರ್ಮಗೌಡರ, ಸಚಿನ ಕುಸುಗಲ್ಲ, ಸುರೇಶ ದಾಸರ, ಅಶೋಕ ಉಪ್ಪಾರ,  ಪ್ರಾಚಾರ್ಯರಾದ ಚಂದ್ರಿಕಾ ದೇಶಪಾಂಡೆ, ಪದ್ಮಜಾ ಮುರನಾಳ, ರೇಣುಕಾ ಹಡಪದ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು. ಎಂ.ಆರ್.ಸೊಗಲಮಠ ನಿರೂಪಿಸಿ, ವಂದಿಸಿದರು.

Leave a Comment