ಭಕ್ತರ ಸೆಳೆಯುತ್ತಿರುವ ಬಹುರೂಪಿ ಗಣೇಶ ಮೂರ್ತಿಗಳು

ಎಂ. ರಮೇಶ್ ಚಿ. ಸಾರಂಗಿ
ತುಮಕೂರು, ಸೆ. ೧೧- ಮಳೆ ಕೊರತೆ, ಬೆಲೆ ಏರಿಕೆ ನಡುವೆಯೂ ಎಲ್ಲಾ ಶುಭ ಕಾರ್ಯಗಳಲ್ಲೂ ಪ್ರಥಮ ಪೂಜೆ ಸಲ್ಲುವ ವಿಘ್ನ ನಿವಾರಕ ಗಣೇಶ ಚುತುರ್ಥಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ನಾಡಿನ ಜನತೆ ಸಜ್ಜಾಗಿರುವ ಬೆನ್ನಲ್ಲೆ ಮಾರುಕಟ್ಟೆಗೆ ವಿಭಿನ್ನ ಅವತಾರದ ಬಹುರೂಪಿ ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿದ್ದು, ಭಕ್ತರ ಕಣ್ಮನ ಸೆಳೆಯುತ್ತಿವೆ.

ನಾಡಿನಾದ್ಯಂತ ಗೌರಿ-ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸನ್ನದ್ಧರಾಗಿದ್ದು, ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಗೌರಿ, ಗಣೇಶ ಮೂರ್ತಿಗಳನ್ನು ಮಹಿಳೆಯರಾದಿಯಾಗಿ ಯುವಕರ ದಂಡು ನಾ.. ಮುಂದು, ತಾ… ಮುಂದು ಎಂದು ಖರೀದಿಸುತ್ತಿರುವುದು ಹಬ್ಬದ ಮೆರಗನ್ನು ಇಮ್ಮಡಿಗೊಳಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ವಿಭಿನ್ನ ರೂಪದ, ವಿವಿಧ ಆಕಾರ, ಅವತಾರದ ಗಣಪತಿ ಮೂರ್ತಿಗಳು ನಗರದ ಮಾರುಕಟ್ಟೆಯಲ್ಲಿ ಕಾಣ ಸಿಗುತ್ತಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಯುವಕರನ್ನು ತನ್ನತ್ತ ಸೆಳೆಯುತ್ತಿವೆ. ಮಾರುಕಟ್ಟೆಯಲ್ಲಿ 1 ಅಡಿ ಎತ್ತರದ ಗಣಪತಿಯಿಂದ ಸುಮಾರು 10 ಅಡಿ ಎತ್ತರದ ವರೆಗೆ ವಿವಿಧ ಆಕಾರದ ವಿಭಿನ್ನ ಗಣೇಶ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು, ನಗರದ ಮಾರುಕಟ್ಟೆಯಿಂದ ಭಕ್ತರು ನಿರ್ಮಿಸಿರುವ ಪೆಂಡಾಲ್‌ಗಳಿಗೆ ಗಣೇಶ ಮೂರ್ತಿಗಳು ವಾಹನಗಳ ಮುಖೇನ ರವಾನೆಯಾಗುತ್ತಿವೆ.

ಈ ಬಾರಿ ಜನತೆ ಪಿಓಪಿ ಗಣಪತಿ ಮೂರ್ತಿಗಳಿಗಿಂತ ಹೆಚ್ಚು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಖರೀದಿಯಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ.

ಪಿಒಪಿ ಗಣಪತಿಗಳಿಗೆ ಗುಡ್ ಬೈ, ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಿಗೆ ಜೈ ಎಂಬ ಜೈಕಾರಗಳೊಂದಿಗೆ ಯುವಕರ ದಂಡು ತಮ್ಮ ತಮ್ಮ ಊರುಗಳಿಗೆ ಗಣೇಶಮೂರ್ತಿಗಳನ್ನು ಕೊಂಡೊಯ್ಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ನಗರದ ಅಶೋಕ ರಸ್ತೆ, ಟೌನ್‌ಹಾಲ್ ವೃತ್ತ, ಬಿ.ಹೆಚ್. ರಸ್ತೆ ಸೇರಿದಂತೆ ಮಾರುಕಟ್ಟೆಯಲ್ಲಿ ಕೃಷ್ಣ, ಬಾಹುಬಲಿ ಸೇರಿದಂತೆ ವಿವಿಧ ರೂಪದ, ಬೃಹದಾಕಾರದ ಗಣೇಶ ಮೂರ್ತಿಗಳ ಖರೀದಿಗೆ ಭಕ್ತರು ಒಲವು ತೋರುತ್ತಿರುವುದು ವಿಶೇಷವಾಗಿದೆ.
ಚಿತ್ತಾಕರ್ಷಕ ಬಣ್ಣಗಳ ಲೇಪನ ಮಾಡಿರುವ ಗಣೇಶ ಮೂರ್ತಿಗಳಿಂದ ಪರಿಸರ ಸ್ನೇಹಿ ಗಣಪಗಳ ಖರೀದಿಸುವ ಮೂಲಕ ಭಕ್ತರು ಪರಿಸರ ರಕ್ಷಣೆ ಬಗ್ಗೆ ಬದ್ಧತೆ ತೋರಿರುವುದು ಹೆಮ್ಮೆಯ ಸಂಗತಿ.

ಪ್ರತಿ ವರ್ಷಕ್ಕಿಂತಲೂ ಈ ಬಾರಿ ಗಣೇಶ ಮೂರ್ತಿಗಳ ಬೆಲೆ ಜಾಸ್ತಿಯಾಗಿದ್ದರೂ ಸಹ ಕಂಗೆಡದೆ ಭಕ್ತರು ವಿಘ್ನ ನಿವಾರಕನನ್ನು ತಮ್ಮ ಊರು, ಮನೆ ಮನಗಳಲ್ಲಿ ಪ್ರತಿಷ್ಠಾಪಿಸಲು ಮುಂದಾಗಿದ್ದು, ಕಳೆದ 2 ದಿನಗಳಿಂದ ಗಣೇಶ ಮೂರ್ತಿಗಳ ಮಾರಾಟ ಬಲು ಜೋರಾಗಿದೆ.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ನಿನ್ನೆ ನಡೆದ ಭಾರತ್ ಬಂದ್ ಬಿಸಿ ಗೌರಿ-ಗಣೇಶನಿಗೂ ತಟ್ಟಿತು. ನಿನ್ನೆ ಬೆಳಿಗ್ಗೆಯಿಂದ ಸಂಜೆವರೆವಿಗೂ ಮಾರುಕಟ್ಟೆಯಲ್ಲಿ ಗೌರಿ-ಗಣೇಶ ಮೂರ್ತಿಗಳ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಸಂಜೆ 7 ಗಂಟೆಯ ನಂತರ ನಗರದ ಜನತೆ ಗೌರಿ ಮೂರ್ತಿಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.

1 ಅಡಿ ಗಣೇಶ ಮೂರ್ತಿಗಳ ಬೆಲೆ 500 ರೂ. ಇದ್ದು, 2, 3, 4, 5, 6 ಹೀಗೆ 10 ಅಡಿಗಳ ಎತ್ತರದ ಗಣೇಶಮೂರ್ತಿಗಳನ್ನು ಸಾವಿರಾರುಗಳಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಗೌರಿ ಮೂರ್ತಿಗಳನ್ನು 150 ರೂ.ನಿಂದ ಸಾವಿರದ ವರೆಗೆ ಮಾರಾಟ ಮಾಡಲಾಗುತ್ತಿದೆ.

ಎಲ್ಲಾ ದೇವತಾ ಪೂಜೆಗಳಲ್ಲೂ ಅಗ್ರ ಸ್ಥಾನ ಪಡೆದಿರುವ ವಿಘ್ನ ನಿವಾರಕ ವಿಘ್ನೇಶ್ವರನನ್ನು ಭಕ್ತರು ವಿವಿಧ ರೀತಿಯಲ್ಲಿ ಅಲಂಕರಿಸಿ ವಾರಗಟ್ಟಲೆ, ತಿಂಗಳುಗಟ್ಟಲೆ ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಂಘ ಸಂಸ್ಥೆಗಳಂತೂ ತಿಂಗಳುಗಟ್ಟಲೆ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಏರ್ಪಡಿಸುವುದರ ಜತೆಗೆ ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಭಕ್ತಾದಿಗಳನ್ನು ರಂಜಿಸಲು ಸಜ್ಜಾಗಿವೆ.

ಪ್ರತಿನಿತ್ಯ ವಿಘ್ನೇಶ್ವರನನ್ನು ಭಕ್ತಿಯಿಂದ ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ಮಂಡಿಸಿ ಸಿದ್ದಿಸಿಕೊಳ್ಳುವುದು ಭಕ್ತರ ಕಾಯಕ. ಗೌರಿ, ಗಣೇಶ ಹಬ್ಬವು ಅಣ್ಣತಮ್ಮಂದಿರು, ಅಕ್ಕತಂಗಿಯರು ಸೇರಿದಂತೆ ನೆಂಟರಿಷ್ಟರೆಲ್ಲಾ ಒಂದೆಡೆ ಸೇರಿ ಆಚರಿಸುವ ವಿಶಿಷ್ಟ ಹಬ್ಬ. ವಿವಾಹವಾದ ಹೆಣ್ಣು ಮಕ್ಕಳು ತಮ್ಮ ತವರಿನಿಂದ ಅಣ್ಣಂದಿರು, ತಮ್ಮಂದಿರುವ ಬಾಗಿನ ತರುತ್ತಾರೆಂದು ಕಾಯುವ ಹಬ್ಬ ಇದಾಗಿದ್ದು, ತವರಿನ ಬಾಗಿನ-ಉಡುಗೊರೆ ಹೆಣ್ಣುಮಕ್ಕಳಿಗೆ ಅತ್ಯಂತ ಪ್ರೀತಿ, ಸಂತೋಷ. ಹೀಗಾಗಿ ಮಹಿಳೆಯರಿಗೆ ಗೌರಿ ಹಬ್ಬ ಬಂತೆಂದರೆ ಒಂದು ರೀತಿಯಲ್ಲಿ “ಬಂಪರ್” ಹಬ್ಬ.

ಗೌರಿ, ಗಣೇಶ ಹಬ್ಬ ಎರಡು ದಿನಗಳ ಕಾಲ ಆಚರಿಸುವ ಹಬ್ಬ. ಪ್ರತಿ ವರ್ಷದಂತೆ ಈ ವರ್ಷವು ತುಮಕೂರು ನಗರದ ಅಶೋಕ ರಸ್ತೆಯ ಬದಿಗಳಲ್ಲಿ ವೈವಿಧ್ಯಮಯ, ರಂಗುರಂಗಿನ ಅಡಿಯಿಂದ ಮುಡಿವರೆಗಿನ ಪುಟ್ಟಪುಟ್ಟ ಗಣೇಶನಿಂದ ಹಿಡಿದು ಆಳೆತ್ತರದ ವಿಗ್ರಹಗಳು ಕಣ್ಮನ ಸೆಳೆಯುತ್ತಿದ್ದು, ಭರದಿಂದ ಮಾರಾಟವಾಗುತ್ತಿವೆ. ಎಷ್ಟೇ ದುಬಾರಿ ಹಣ ಹೇಳಿದರೂ ಭಕ್ತರು ಲೆಕ್ಕಿಸದೇ ಗೌರಿ, ಗಣೇಶನ ವಿಗ್ರಹಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಚಿಣ್ಣರಂತೂ ಗುಂಪು-ಗುಂಪಾಗಿ ಬಂದು ಗೌರಿ ಗಣೇಶನಿಗಾಗಿ ಮುಗಿ ಬಿದ್ದಿದ್ದಾರೆ.

ಪ್ರತಿಯೊಬ್ಬ ಭಕ್ತನ ಸಂಕಷ್ಠ ನಿವಾರಕ ಗಣೇಶ. ಈ ಗಣೇಶನ ಹಬ್ಬವನ್ನು ಆಚರಿಸಲು ಮಳೆ ಕೊರತೆ ನಡುವೆಯೂ ಜನತೆ ಹರ್ಷದಿಂದ ಇದ್ದಾರೆ. ರೈತರಂತೂ ಕಳೆದ 1 ತಿಂಗಳಿಂದ ಮಳೆ ಇಲ್ಲದೆ ಕಂಗೆಟ್ಟಿದ್ದು, ಗೌರಿ-ಗಣೇಶನ ಆಗಮನದಿಂದಾದರೂ ವರುಣ ಕೃಪೆ ತೋರುವನೋ ಎಂಬ ನಿರೀಕ್ಷೆಯಲ್ಲಿ ಹಬ್ಬವನ್ನು ಸಡ‌ಗರದಿಂದ ಆಚರಿಸಲು ಉತ್ಸುಕರಾಗಿದ್ದಾರೆ.

ಕಳೆದ ಐದಾರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಜಾಸ್ತಿಯಾಗಿತ್ತು. ಆದರೆ ಬಿತ್ತನೆಯಾದ ನಂತರ ಹಂತ ಹಂತವಾಗಿ ಬೀಳ ಬೇಕಾಗಿದ್ದ ಮಳೆ ಹಾಗೆಯೇ ಮೋಡಗಳ ನಡುವೆ ಚೆಲ್ಲಾಟವಾಡುತ್ತಾ ರೈತನನ್ನು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ವಿಘ್ನ ನಿವಾರಕ ವಿಘ್ನೇಶ್ವರನ ಆಶೀರ್ವಾದದಿಂದಲಾದರೂ ಮಳೆಯಾಗಬಹುದು ಎಂಬ ನಿರೀಕ್ಷೆ ರೈತ ಸಮೂಹದಲ್ಲಿದೆ.

ಮೊರಗಳ ಮಾರಾಟ ಜೋರು
ಗೌರಿಯನ್ನು ಪೂಜಿಸುವ ಪ್ರತಿಯೊಬ್ಬರು ಬಾಗಿನವನ್ನು ಕೊಡುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಮೊರಗಳ ಮಾರಾಟವೂ ಬಲು ಜೋರಾಗಿದೆ.

ನಗರದ ಕೋತಿತೋಪು ರಸ್ತೆ, ಚರ್ಚ್ ಸರ್ಕಲ್ ರಸ್ತೆ, ಚಿಕ್ಕಪೇಟೆ, ಎಸ್.ಎಸ್.ಪುರಂ, ಎಸ್ಐಟಿ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ಮೊರಗಳ ಮಾರಾಟ ಭರ್ಜರಿಯಾಗಿದೆ. ಅಲ್ಲದೆ ಗ್ರಂಧಿಗೆ ಅಂಗಡಿಗಳಲ್ಲೂ ಮೊರಗಳ ಮಾರಾಟದ್ದೇ ಕಾರುಬಾರು.

ಗಗನಕ್ಕೇರಿದ ಬೆಲೆ
ನಗರದ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಹೂ, ಬಾಳೆಹಣ್ಣು, ಬಾಳೆಕಂದು, ಮಾವಿನ ಎಲೆ, ತಳಿರು-ತೋರಣ, ಇನ್ನಿತರೆ ಸಾಮಗ್ರಿಗಳಿಗಂತೂ ಜನತೆ ಮುಗಿ ಬಿದ್ದಿದ್ದಾರೆ. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಖರೀದಿಯಂತೂ ಕಡಿಮೆಯಾಗಿಲ್ಲ. ನಗರದ ಎಲ್ಲ ರಸ್ತೆಗಳಲ್ಲೂ ಹೂ, ಹಣ್ಣು, ಬಾಳೆಕಂದು, ಮಾವಿನ ಸೊಪ್ಪಿನ ಮಾರಾಟ ಭರದಿಂದ ಸಾಗಿದೆ.
ಹೂವಿನ ಬೆಲೆ ಹೆಚ್ಚಳವಾಗಿರುವುದರಿಂದ ಹಾರಗಳ ಬೆಲೆ ಮಣ ಭಾರವಾಗಿದೆ. ಸುಗಂಧರಾಜ, ಮಲ್ಲಿಗೆ, ಸೇವಂತಿಗೆ ಹಾರಗಳು 250 ರೂ.ಗಳ ಗಡಿ ದಾಟಿವೆ. ಇನ್ನು ಗುಲಾಬಿ ಹೂ ಹಾರಗಳ ಬೆಲೆ ಕೇಳುವುದಕ್ಕೆ ಭಯವಾಗುತ್ತಿದೆ. ಆದರೂ ಜನತೆ ಗೌರಿ-ಗಣೇಶ ಹಬ್ಬವನ್ನು ಆಚರಿಸಲು ಎಷ್ಟೇ ದುಪ್ಪಟು ಬೆಲೆಯಾದರೂ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಯಲ್ಲಿ ಕಿಕ್ಕಿರಿದು ತುಂಬಿರುವ ದೃಶ್ಯಗಳು ಕಂಡು ಬರುತ್ತಿವೆ.

ಈ ಬಾರಿ ಮಳೆ ಕೈಕೊಟ್ಟಿರುವುದು ಗಣೇಶ ಮೂರ್ತಿಗಳ ಮಾರಾಟ ಕಳೆಗುಂದಿದೆ.  ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ನೀರಿನಿಂದ ತುಂಬಿದ್ದರೆ ಜನತೆ ಮತ್ತಷ್ಟು ಉತ್ಸಾಹದಿಂದ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದರು. ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ಗಣೇಶ ಮೂರ್ತಿಗಳ ವ್ಯಾಪಾರ ಮಂಕಾಗಿದೆ ಎನ್ನುತ್ತಾರೆ  ಗಣೇಶ ಮೂರ್ತಿ ವ್ಯಾಪಾರಿ ಪ್ರದೀಪ್.
ವಿಘ್ನ ನಿವಾರಕನ ಆಗಮನದಿಂದಲಾದರೂ ಕಲ್ಪತರುನಾಡಿನಲ್ಲಿ ಕಣ್ಮರೆಯಾಗಿರುವ ವರುಣ ಕೃಪೆ ತೋರಿ ಒಣಗುತ್ತಿರುವ ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಉಳಿಸಿ ರೈತನ ಬದಕನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತಾನೋ ಎಂಬುದನ್ನು ಕಾದು ನೋಡೋಣ.

Leave a Comment