ಭಕ್ತರ ಮನೆಗೆ ಕೋರಣ್ಯ ಭಿಕ್ಷೆಗೆ ತೆರಳಿದ ಈಶ್ವರಾನಂದಪುರಿ ಶ್ರೀ

ದಾವಣಗೆರೆ.ಆ.13; ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ನಗರದಲ್ಲಿ ಶ್ರಾವಣ ಮಾಸದ ವಿಶೇಷವಾಗಿ ಕುರುಬ ಸಮುದಾಯದ ಸಂಪ್ರದಾಯದಂತೆ ಶ್ರಾವಣಭಿಕ್ಷೆ ವಿಶಿಷ್ಟ ಕಾರ್ಯಕ್ರಮ ನಡೆಸಿದರು.ಇದೇ ವೇಳೆ ಮಾತನಾಡಿದ ಶ್ರೀಗಳು, ಕಾಲಧರ್ಮದ ಒತ್ತಡದಲ್ಲಿ ಕೆಲವು ಪಾರಂಪರಿಕ ಆಚರಣೆಗಳು ಕಡಿಮೆಯಾಗುತ್ತಿವೆ. ಶ್ರಾವಣ ಮಾಸದಲ್ಲಿ ಮನೆ-ಮನೆಗಳಲ್ಲಿ ವಿವಿಧ ಗ್ರಾಮಗಳಿಂದ ಕೋರಣ್ಯ ಭಿಕ್ಷೆ ಮಾಡಿ ಸಂಗ್ರಹಿಸಿದ ಅಕ್ಕಿ ಪಡಿಯಿಂದ ಶ್ರಾವಣ ಕೊನೆಯ ಸೋಮವಾರ ಗುರುಮಠದಲ್ಲಿ ವಿಶೇಷ ಪೂಜೆ, ರೇವಣ ಸಾಂಗತ್ಯ ಕಥಾ ಪಾರಾಯಣ ನಂತರ ಎಲ್ಲರಿಗೂ ಸಾಮೂಹಿಕ ಸಹಪಂಕ್ತಿ ಭೋಜನದ ವ್ಯವಸ್ಥೆ ಮಾಡುವುದು ಅನಾದಿ ಕಾಲದಿಂದಲೂ ಕುರುಬರ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿರುವ ಪರಂಪರೆಯಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ, ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾಗಿನೆಲೆ ಗುರುಪೀಠದಿಂದ ಶ್ರಾವಣಭಿಕ್ಷೆ ಮೂಲಕ ಸಂಸ್ಕತಿ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕೆಲಸ ಸಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಗುರುಗಳು ಆಯ್ದ ತಾಲೂಕುಗಳ ಗ್ರಾಮಗಳಿಗೆ ಶ್ರಾವಣಭಿಕ್ಷೆಗೆ ತೆರಳಲಿದ್ದಾರೆ. ನೇರವಾಗಿ ಭಕ್ತರ ಮನೆಗೆ ಕೋರಣ್ಯ ಭಿಕ್ಷೆಗೆ ತೆರಳಿ ಭಕ್ತರು ನೀಡುವ ಅಕ್ಕಿ, ಹಸಿಹಿಟ್ಟು, ಹಣ(ಧನ, ಕನಕ, ಧಾನ್ಯ) ಮುಂತಾದವುಗಳನ್ನು ಸಂಗ್ರಹಿಸಿ, ಶ್ರೀಮಠದ ದಾಸೋಹ, ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ. ಈ ಮೂಲಕ ಗುರುಗಳು ಭಕ್ತರೊಂದಿಗೆ ನೇರ ಸಂಪರ್ಕವನ್ನು ಸಾಧಿಸುತ್ತಾ, ಒಂದೆಡೆ ಸಂಘಟಿಸುವ ಕೆಲಸ ಮಾಡುತ್ತಾರೆ.ಶನಿವಾರದಂದು ಮಾಜಿ ಮೇಯರ್ ಹೆಚ್.ಬಿ.ಗೋಣೆಪ್ಪ, ಕನಕ ಬ್ಯಾಂಕ್‍ನ ಪರಶುರಾಮ, ಮಲ್ಲಿಕಾರ್ಜುನಪ್ಪ, ಹದಡಿ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಸಿ.ನಿಂಗಪ್ಪ, ಬಳ್ಳಾರಿ ಷಣ್ಮುಖಪ್ಪ, ಹಿಟ್ಟಿಗುಡಿ ಮಂಜುನಾಥ, ಬಿ.ನಿಂಗರಾಜ, ಹಾಲೇಕಲ್ಲು ವೀರಣ್ಣ, ಗೌಡ್ರು ಚನ್ನಬಸಪ್ಪ, ಚಂದ್ರು ದೀಟೂರು, ಬಂಡಿ ಬಸವರಾಜಪ್ಪ, ರಾಜನಹಳ್ಳಿ ಶಿವಕುಮಾರ ಸೇರಿದಂತೆ ಹಲವರ ಮನೆಗೆ ಶ್ರೀಗಳು ಭೇಟಿ ನೀಡಿ ಶ್ರಾವಣಭಿಕ್ಷೆ ಸ್ವೀಕರಿಸಿದರು. ಆ.14ರಂದು ಶ್ರೀಗಳು ಜಗಳೂರು,ಹರಪ್ಪನಹಳ್ಳಿ, 16ಕ್ಕೆ ಮಲೆಬೆನ್ನೂರು, ಹೊನ್ನಾಳಿ, 17ಕ್ಕೆ ಮಾಯಾಕೊಂಡ, ತ್ಯಾವಣಿಗೆ, ಬೆಳಲಗೆರೆ ಹೀಗೆ ವಿವಿಧೆಡೆ ಸುಮಾರು ಒಂದು ತಿಂಗಳ ಕಾಲ ಶ್ರಾವಣಭಿಕ್ಷೆ ಕೈಗೊಳ್ಳಲಿದ್ದಾರೆ.

Leave a Comment