ಭಕ್ತಗಣದ ಹರ್ಷೋದ್ಘಾರಗಳ ಮಧ್ಯೆ ರಾಯಚೋಟಿ ಶ್ರೀವೀರಭದ್ರಸ್ವಾಮಿ ರಥೋತ್ಸವ

ಧಾರವಾಡ ಫೆ.28-: ‘ಹರಹರ ಮಹಾದೇವ… ಶ್ರೀಭದ್ರಕಾಳಿ ಸಮೇತ ರಾಯಚೋಟಿ ವೀರಭದ್ರೇಶ್ವರ ಮಹಾರಾಜಕೀ ಜೈ… ಮಾನವ ಧರ್ಮಕ್ಕೆ ಜಯವಾಗಲಿ… ಧರ್ಮದಿಂದಲೇ ವಿಶ್ವಕ್ಕೆ ಶಾಂತಿ…’ ಎಂದೆಲ್ಲ ಭಕ್ತಗಣದ ಜಯಘೋಷಗಳು ಮೊಳಗುತ್ತಿದ್ದಂತೆ ಆಂಧ್ರಪ್ರದೇಶ ರಾಜ್ಯದ ರಾಯಚೋಟಿ ಕ್ಷೇತ್ರದ ಶ್ರೀವೀರಭದ್ರಸ್ವಾಮಿಯ ವಾರ್ಷಿಕ ರಥೋತ್ಸವ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ಜರುಗಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಕಲಬುರ್ಗಿ-ಬೀದರದಿಂದ ಮೊದಲ್ಗೊಂಡು ಬಹುಪಾಲು ಜಿಲ್ಲೆಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಶೃದ್ಧಾ-ಭಕ್ತಿಯ ಸೇವೆಗಳನ್ನು ಸಲ್ಲಿಸಿದರು. ರಥವು ಆರಂಭಗೊಳ್ಳುತ್ತಿದ್ದಂತೆ ಉತ್ತತ್ತಿ, ಬಾಳೆಹಣ್ಣೂ, ಕಾಳು ಮೆಣಸು, ಲಿಂಬಿಹಣ್ಣುಗಳನ್ನು ರಥಕ್ಕೆ ಎಸೆದು ಭಕ್ತಿಯ ನಮನಗಳನ್ನು ಸಲ್ಲಿಸುತ್ತಿರುವುದು ಸಾಮಾನ್ಯವಾಗಿತ್ತು.
ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಅಲಂಕೃತ ರಥದ ಪೂಜಾ ಕೈಂಕರ್ಯ ಜರುಗಿತು. ಹುಬ್ಬಳ್ಳಿ ತಾಲೂಕು ಸುಳ್ಳ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಜಿಲ್ಲೆ ಸಿದ್ಧರಬೆಟ್ಟ ಕ್ಷೇತ್ರದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ರಾಯಚೂರು ಜಿಲ್ಲೆ ಕಿಲ್ಲೆ ಸಾವಿರದೇವರ ಸಂಸ್ಥಾನ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲ ತಾಲೂಕು ಸಂಪಗಾಂವ ಕಟಾಪುರಿ ಹಿರೇಮಠದ ಶ್ರೀಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಶ್ರೀಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ನಂದ್ಯಾಲದ ಬೃಹ್ಮಶ್ರೀ ನಂದುಲಮಠದ ಶಶಿಭೂಷಣ ಸಿದ್ಧಾಂತಿಗಳು ಪಾಲ್ಗೊಂಡಿದ್ದರು.
ಕಳೆದ 9 ದಿನಗಳ ಪರ್ಯಂತರ ಜರುಗಿದ ಜಾತ್ರಾ ಮಹೋತ್ಸವದಲ್ಲಿ ಅಂಕುರಾರೋಪಣ, ಮಹಾಗಣಪತಿ ಪೂಜಾ, ದೀಕ್ಷಾ ಕಂಕಣ ಧ್ವಜಾರೋಹಣ, ತ್ರಿಶೂಲ ಉತ್ಸವ, ಕಲ್ಯಾಣ ಉತ್ಸವ, ಪುರುಷಾಮೃಗೋತ್ಸವ, ಗಜವಾಹನೋತ್ಸವ,  ಯಾಳಿವಾಹನೋತ್ಸವ, ಸಿಂಹವಾಹನೋತ್ಸವ, ಹುಲಿವಾಹನೋತ್ಸವ, ರಾವಣ ವಾಹನೋತ್ಸವ,  ಚಂಡಿಹೋಮ, ಶೇಷವಾಹನೋತ್ಸವ, ಚಂದ್ರಪ್ರಭಾ ವಾಹನೋತ್ಸವ, ಸೂರ್ಯಪ್ರಭುತ್ಸವ, ನಂದಿವಾಹನೋತ್ಸವ, ಶ್ರೀವೀರಭದ್ರಸ್ವಾಮಿಗೆ ಹಾಗೂ ಶ್ರೀಭದ್ರಕಾಳಿ ಅಮ್ಮನವರಿಗೆ ಬಂಗಾರದ ಕಿರೀಟ ಧಾರಣೆ, ಅಗ್ನಿಕುಂಡ ಪ್ರವೇಶ, ವಜ್ರದ ತ್ರಿನೇತ್ರ ಧಾರಣೆ, ಮಹಾನೈವೇದ್ಯ, ಮಹಾಪೂರ್ಣಾಹುತಿ, ವಸಂತೋತ್ಸವ, ಹಂಸವಾಹನೋತ್ಸವ  ಮತ್ತಿತರ ಪಾರಂಪರಿಕ ಹತ್ತು-ಹಲವು ಧಾರ್ಮಿಕ ಸೇವೆಗಳು ಜರುಗಿದವು.
ಶ್ರೀವೀರಭದ್ರೇಶ್ವರ ದೇವಾಲಯ ಟ್ರಸ್ಟ ಕಾರ್ಯನಿರ್ವಾಹಕ ಅಧಿಕಾರಿ ಟಿ. ಮಂಜುಳಾ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಸಮಯಕ್ಕೆ ಸರಿಯಾಗಿ ಉತ್ಸಾಹದಿಂದ ಪಾಲ್ಗೊಂಡು 9 ದಿನಗಳ ಎಲ್ಲ ಕಾರ್ಯಗಳ ಯಶಸ್ವೀ ನಿರ್ವಹಣೆಗೆ ಕಾರಣರಾದರು. ಹುಬ್ಬಳ್ಳಿ ಮಹಾನಗರದ ಶ್ರೀವೀರಭದ್ರಸ್ವಾಮಿ ರಥೋತ್ಸವ ಸೇವಾ ಸಮಿತಿಯ ಗಿರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಸಿ.ಎಂ.ಶಿವಶರಣಪ್ಪ ಕಲಬುರ್ಗಿ, ಪಿ.ಎಂ. ಚಿಕ್ಕಮಠ, ಪ್ರಕಾಶ ಅಂದಾನಿಮಠ, ಶಂಕರ ಕುರ್ತಕೋಟಿ, ಅನಿಲ ಉಳ್ಳಾಗಡ್ಡಿ, ರಾಚಯ್ಯ ಮಠಪತಿ, ಎಂ.ಐ. ದೇಶನೂರ, ಶಿವಾನಂದ ನಾಗಠಾಣ, ಗಂಗಾಧರ ಹಿರೇಮಠ, ರಮೇಶಕುಮಾರ ಬುಡರಕಟ್ಟಿಮಠ, ಗಂಗಾಧರ ನಾಗಠಾಣ, ಮಹೇಶ ಸೂಡಿ, ಮಲ್ಲಿಕಾರ್ಜೂನ ಕುರ್ತಕೋಟಿ, ನಾಗನಗೌಡ ನೀರಲಗಿ ಅವರು ಕ್ಷೇತ್ರದಲ್ಲಿದ್ದು, ವಿವಿಧ ಸೇವಾ ಕೈಂಕರ್ಯಗಳಿಗೆ ಸಾಕ್ಷಿಯಾದರು.
ನಿರಂತರ ದಾಸೋಹ : ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತ ಸಂಕುಲಕ್ಕೆ ಬೈಲಹೊಂಗಲದ ವೀರಯ್ಯ ಮುಪ್ಪಯ್ಯನಮಠ ಹಾಗೂ ನರಗುಂದದ ಚೆನ್ನಪ್ಪ ನಾಗಠಾಣ ಅವರ ಹಿರಿತನದಲ್ಲಿ ನಿರಂತರ ದಾಸೋಹ ವ್ಯವಸ್ಥಿತವಾಗಿ ಜರುಗಿತು. ಬುಧವಾರ ರಾತ್ರಿ ಜರುಗಿದ ವಿಶೇಷ ಸಮಾರಂಭದಲ್ಲಿ ವಿವಿಧ ದಾನಿಗಣ್ಯರನ್ನು ಹಾಗೂ ಎಲ್ಲ ಸೇವಾ ಕರ್ತರನ್ನು ದೇವಾಲಯ ಟ್ರಸ್ಟ ವತಿಯಿಂದ ಗೌರವಿಸಲಾಯಿತು.

Leave a Comment