ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ 13 ರಂದು

 

ಕಲಬುರಗಿ ಸೆ 11: ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೆಯ  ಜಯಂತ್ಯುತ್ಸವವನ್ನು ಸೆಪ್ಟೆಂಬರ್ 13 ರಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಆರ್ಯ ಈಡಿಗ ಸಂಘದ ಸಹಯೋಗದಲ್ಲಿ ನಗರದ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಜಯಂತ್ಯುತ್ಸವವನ್ನು  ಸರಳ ರೀತಿಯಿಂದ ಆಚರಿಸಲು ಜಿಲ್ಲಾ ಆರ್ಯ ಈಡಿಗರ ಸಂಘ ನಿರ್ಧರಿಸಿದ್ದು,ಜಯಂತಿಗಾಗಿ ಜಿಲ್ಲೆಗೆ ಸರ್ಕಾರದ ವತಿಯಿಂದ ನೀಡಲಾಗುವ  ಸುಮಾರು 2.75 ಲಕ್ಷ ರೂ.ಮೊತ್ತವನ್ನು  ನೆರೆ ಸಂತ್ರಸ್ಥರಿಗಾಗಿ  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳಲಾಗಿದೆ.ಅಂದು ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು,ವಿಕಲ ಚೇತನರಿಗೆ ಗಾಲಿಕುರ್ಚಿ ವಿತರಿಸಲಾಗುವದು  ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ ಗುತ್ತೇದಾರ ಮತ್ತು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಾಲರಾಜ ಗುತ್ತೇದಾರ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶಿಷ್ಟ ಮೆರವಣಿಗೆ:

13 ರಂದು ಬೆಳಿಗ್ಗೆ 10.30 ಕ್ಕೆ ಸರದಾರ ವಲ್ಲಭಭಾಯಿ ಪಟೇಲ ವೃತ್ತದಿಂದ ರಂಗಮಂದಿರದವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ವಾದ್ಯವೃಂದದ ಆಡಂಬರವಿರುವದಿಲ್ಲ. ನಾರಾಯಣಗುರುಗಳ ಸೂಕ್ತಿಗಳ 1 ಸಾವಿರ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗುತ್ತೇವೆ. 1 ಸಾವಿರ ಸಸಿಗಳನ್ನು ಮೆರವಣಿಗೆಯುದ್ದಕ್ಕೂ ಬರುವ ಅಂಗಡಿ ಮಳಿಗೆಗಳಿಗೆ ನೀಡಿ ಸಸಿ ನೆಡಲು ಕೋರಲಾಗುವದು ಎಂದರು.

ವೇದಿಕೆ ಕಾರ್ಯಕ್ರಮ ಮಧ್ಯಾಹ್ನ 12.30 ಕ್ಕೆ ನಡೆಯಲಿದ್ದು,ಸಂಸದ  ಡಾ. ಉಮೇಶ ಜಾಧವ ಉದ್ಘಾಟಿಸುವರು.ಎಂ.ಒ.ಮಮತೇಶ ಕಡೂರ ವಿಶೇಷ ಉಪನ್ಯಾಸ ನೀಡಲಿದ್ದು.ಬಸಯ್ಯ ಗುತ್ತೇದಾರ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು.ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಸಮಾಜದ ಗಣ್ಯರು, ಸರ್ಕಾರದ ಉನ್ನತ ಅಧಿಕಾರಿಗಳು ಉಪಸ್ಥಿತರಿರುವರು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ರುಕ್ಮಯ್ಯ ರಾವೂರ, ವೆಂಕಟೇಶ ಕಡೇಚೂರ,ಚಂದ್ರಶೇಖರ ಗುತ್ತೇದಾರ ಸೇರಿದಂತೆ ಹಲವರಿದ್ದರು..

Leave a Comment