ಬ್ಯಾಡಗಿ ಮೆಣಸಿನಕಾಯಿ- ಫುಡ್ ಪಾರ್ಕ್ ನಿರ್ಮಿಸಲು ಸಂಸದರ ಕರೆ

ಬ್ಯಾಡಗಿ.ಸೆ.9- ಬೆಳೆದಂತಹ ಶೇ.42 ರಷ್ಟು ಮೆಣಸಿನಕಾಯಿ ವಿದೇಶಗಳಿಗೆ ರಫ್ತಾಗುತ್ತಿದೆ ಆದರೆ ಅದಕ್ಕೆ ವಿಶ್ವ ಮಾರುಕಟ್ಟೆಯಲ್ಲಿ (ಡಬ್ಲೂಟಿಓ) ಬ್ರಾಂಡ್ ಸಿಗದಿರುವುದು ದುರಂತ ವಿಷಯ, ಮೆಣಸಿನಕಾಯಿ ಮಾರಾಟವನ್ನು ಎರಡನೇ ಹಂತಕ್ಕೆ ಕೊಂಡೊಯ್ಯುಬೇಕಾಗಿದ್ದರೇ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಫುಡ್ ಪಾರ್ಕಗಳನ್ನು ನಿರ್ಮಿಸಲು ಸಿದ್ಧರಾಗುವಂತೆ ಸಂಸದ ಶಿವಕುಮಾರ ಉದಾಸಿ ವರ್ತಕರಿಗೆ ಕರೆ ನೀಡಿದರು.
ವರ್ತಕರ ಸಂಘದ ಆಶ್ರಯದಲ್ಲಿ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ “ಚಿಲ್ಲಿ ಎಕ್ಸಪೋ-2018” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಇಂದಿಗೂ ಮೂಲ ಸ್ಥಾನದಲ್ಲಿಯೇ ಉಳಿದುಕೊಂಡಿದೆ, ಇಲ್ಲಿ ವ್ಯಾಪಾರಸ್ಥರಿಗಿಂತಲೂ ಹೆಚ್ಚು ರೈತರಿಗೆ ಪ್ರಯೋಜನಗಳಾಗುತ್ತಿವೆ, ಬ್ಯಾಡಗಿ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿರುವ ನೂರಾರು ವಿದೇಶಿ ಕಂಪನಿಗಳು ಇಂದು ವಿಶ್ವ ಮಾರುಕಟ್ಟೆಯಲ್ಲಿ ಬ್ರಾಂಡ್ ಆಗಿ ಉಳಿದುಕೊಂಡಿವೆ ಎಂದರು.
ನೇರ ರಫ್ತಿಗೆ ಒತ್ತು ನೀಡಿ: ಬ್ಯಾಡಗಿಯಲ್ಲಿನ ವರ್ತಕರು ಕೇವಲ ವ್ಯಾಪಾರ ವಹಿವಾಟಿಗಷ್ಟೇ ಸೀಮಿತವಾಗಿದ್ದಾರೆ, ಇದರ ಬದಲಾಗಿ ಎರಡನೇ ಹಂತದ ಮಾರುಕಟ್ಟೆಯನ್ನು ಪ್ರವೇಶಿಸಬೇಕು, ಅದರ ಜೊತೆಗೆ ಬ್ಯಾಡಗಿಯಿಂದಲೇ ನೇರವಾಗಿ ರಫ್ತು ಮಾಡಲು ಸಿದ್ಧರಾಗುವಂತೆ ಕರೆ ನೀಡಿದ ಅವರು, ಇದಕ್ಕೆ ಅವಶ್ಯವಿರುವ ಬಂಢವಾಳನ್ನು ಸೊಸೈಟಿ ಮಾದರಿಯಲ್ಲಿ ಕ್ರೂಢೀಕರಿಸುವ ಮೂಲಕ ನೇರ ರಫ್ತಿಗೆ ಮುಂದಾಗುವಂತೆ ಕರೆ ನೀಡಿದರು.
ಬ್ಯಾಡಗಿ ಮೂಲ ತಳಿ ಮೆಣಸಿನಕಾಯಿ ಇನ್ನೂ ಕೆಲವೇ ವರ್ಷಗಳಲ್ಲಿ ಮಾಯವಾಗುವ ಹಂತಕ್ಕೆ ಬಂದು ತಲುಪಿದೆ, ಇದರಲ್ಲಿರುವ ಕಡಿಮೆ ಖಾರ ಮತ್ತು ನೈಸರ್ಗಿಕ ಬಣ್ಣ ವಿಶ್ವದ ಯಾವುದೇ ತಳಿ ಮೆಣಸಿನಕಾಯಿಯಲ್ಲಿ ಸಿಗುವುದಿಲ್ಲ, ಈ ಕುರಿತು ಕೃಷಿಕರಲ್ಲಿ ಸಮಗ್ರ ಮಾಹಿತಿಯನ್ನು ನೀಡುವ ಮೂಲಕ ತಾಂತ್ರಿಕತೆಯನ್ನು ಬಳಸಿಕೊಂಡು ಸೂರ್ಯನ ಶಾಖದಿಂದ ವೈಜ್ಞಾನಿಕ ರೀತಿಯಲ್ಲಿ ಒಣಗಿಸುವ (ಸೋಲಾರ್ ಡ್ರೈಯಾರ್ಡ) ಕಣಗಳನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಮೆಣಸಿನಕಾಯಿ ಇದೀಗ ಸಾಕಷ್ಟು ಅವಿಷ್ಕಾರಗೊಂಡಿದೆ ಆದರೆ, ವ್ಯಾಪಾರಕ್ಕಷ್ಟೇ ಸೀಮಿತವಾಗಿರುವ ಇಲ್ಲಿ ಮೆಣಸಿನಕಾಯಿ ಬೆಳೆದ ಬಳಿಕ ಗ್ರಾಹಕನ ಕೈಗೆ ತಲುಪುವವರೆಗೂ (ಬಾರ್ನ್ ಟು ಡೆತ್) ವಿವಿಧ ಹಂತಗಳಲ್ಲಿನ ಅವಿಷ್ಕಾರಗಳು ಪಟ್ಟಣದಲೇ ಲಭ್ಯವಾಗಬೇಕು ಅಂದಾಗ ಮಾತ್ರ ಬ್ಯಾಡಗಿ ಇದೊಂದು ಬ್ರಾಂಡ್ ಆಗಲು ಸಾಧ್ಯವೆಂದರು.
: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಮಾರುಕಟ್ಟೆ ಅಭಿವೃದ್ಧಿಗೆ ಬಹು ವಿಸ್ತೀರ್ಣವಾದ ಯಾರ್ಡ ಹೊಂದುವುದೂ ಕೂಡ ಉತ್ತಮ ಬೆಳವಣಿಗೆಯಾಗಿದೆ, ಮೆಣಸಿನಕಾಯಿ ಖರೀದಿಸಿದ ಬಳಿಕ ತಮ್ಮ ಸ್ಥಳಕ್ಕೆ ಕೊಂಡೊಯ್ಯಲು ವ್ಯಾಪಾರಸ್ಥರು ಪ್ರತಿ ಚೀಲಕ್ಕೆ 17 ರಿಂದ 19 ರೂ.ವರೆಗೆ ವ್ಯಯಿಸಬೇಕಾಗಿದೆ, ಅಲ್ಲದೇ ಒಂದು ಕಟ್ಟಡದಲ್ಲಿ ಮೂರ್ನಾಲ್ಕು ಅಂಗಡಿಗಳು ವ್ಯವಹರಿಸುತ್ತಿದ್ದು ಇವೆಲ್ಲವುಗಳಿಗೆ ಪ್ರಮುಖ ಕಾರಣ ಸ್ಥಳಾವಕಾಶದ ಕೊರತೆಯಾಗಿದೆ, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸಲು ನಿರ್ಧರಿಸಿದ್ದು ನೂರು ಎಕರೆಗೂ ಹೆಚ್ಚು ಇರುವಂತಹ ಮಾರುಕಟ್ಟೆಯನ್ನು ನಿರ್ಮಿಸಲು ನಿರ್ಧರಿಸಿದ್ದಾಗಿ ತಿಳಿಸಿದರು.
: ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ಮೆಣಸಿನಕಾಯಿ ಉದ್ದಿಮೆಯಲ್ಲಿ ಇದೀಗ ಚೀನಾ ಭಾರತಕ್ಕೆ ಬಹುದೊಡ್ಡ ಪೈಪೋಟಿ ನೀಡುತ್ತಿದೆ, ಕೃಷಿಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿರುವ ಚೀನಾ ಉತ್ಪಾದನೆಯಲ್ಲಿ ಹೆಚ್ಚಳ ಕಂಡುಕೊಂಡಿದೆ, ಭಾರತ ಸರ್ಕಾರವೂ ಸಹ ವಿಶೇಷ ಪ್ಯಾಕೆಜ್ ನೀಡುವ ಮೂಲಕ ಇಲ್ಲಿನ ಮೆಣಸಿನಕಾಯಿ ಬೆಳೆಗಾರರು, ವರ್ತಕರು ಹಾಗೂ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದರು.
ಇದಕ್ಕೂ ಮುನ್ನ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ವರ್ತಕ ಎಸ್.ಆರ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀ ಸಾನಿಧ್ಯ ವಹಿಸಿದ್ದರು, ಮಾಜಿ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನ, ಹಾವೇರಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಆರ್.ಎಸ್.ಮಾಗನೂರ, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯ ಜಗದೀಶಗೌಡ ಪಾಟೀಲ, ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷರಾದ ಪ್ರಕಾಶ ರಾಯ್ಕರ, ಅರವಿಂದ ಬುರ್ಜಿ, ಮಾಜಿ ಕೋಶಾಧ್ಯಕ್ಷ ಶಶಿಧರ ಶೆಟ್ಟಿ, ಪುರಸಭೆ ಅಧ್ಯಕ್ಷ ಬಿ.ಎಂ.ಛತ್ರದ, ಎಪಿಎಂಸಿ ಅಧ್ಯಕ್ಷ ಚನ್ನಬಸಪ್ಪ ಹುಲ್ಲತ್ತಿ, ಸದಸ್ಯ ಸಿ.ಆರ್.ಪಾಟೀಲ ವರ್ತಕರ ಸಂಘದ ಉಪಾಧ್ಯಕ್ಷ ಎ.ಆರ್.ನದಾಫ್, ಕುಮಾರಗೌಡ್ರ ಪಾಟೀಲ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment