ಬ್ಯಾಂಕ್‌ಗೆ ನಕಲಿ ಚಿನ್ನ ನೀಡಿ ವಂಚನೆ!

ತುಮಕೂರು, ಜು. ೧೧- ನಕಲಿ ಆಭರಣಗಳನ್ನು ಚಿನ್ನದ ಆಭರಣವೆಂದು ದೃಢೀಕರಿಸಿ ಬ್ಯಾಂಕ್‌ಗೆ ನೀಡಿ ಸುಮಾರು 1,52,00 ರೂ. ವಂಚಿಸಿರುವ ಘಟನೆ ನಗರದ ಹೊರವಲಯದ ಯಲ್ಲಾಪುರದಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ನಡೆದಿದೆ.

ಬ್ಯಾಂಕ್ ಮ್ಯಾನೇಜರ್ ಡಿ. ಶ್ವೇತಾ ಪೊಲೀಸರಿಗೆ ದೂರು ಸಲ್ಲಿಸಿದ್ದು, ಆ ಮೂಲಕ ವಂಚನೆ ಪ್ರಕರಣ ಬಹಿರಂಗಗೊಂಡಿದೆ.
ಸಿದ್ದಲಿಂಗಪ್ಪ ಎಂಬುವರು ಬ್ಯಾಂಕ್‌ನಲ್ಲಿ 6 ಚಿನ್ನದ ಬಳೆಗಳನ್ನು ಅಟವಿಟ್ಟು 1 ಲಕ್ಷ ರೂ. ಸಾಲ ಪಡೆದಿದ್ದರು. ಸದರಿ ಬಳೆಗಳನ್ನು ಬ್ಯಾಂಕ್‌ನ ಅಪ್ರೈಸರ್ ಯಲ್ಲಾಪುರದ ರಕ್ಷಾ ಜ್ಯುಯಲಱ್ಸ್‌ನ ಪವನ್ ಎಂಬುವರು ಪರೀಕ್ಷಿಸಿ ಚಿನ್ನದ ಬಳೆಗಳೆಂದು ದೃಢೀಕರಿಸಿದ್ದರು. ಇದನ್ನು ಕಾಳಿಕಾಂಬ ಜ್ಯಾಯಲಱ್ಸ್‌ನ ರವಿಕುಮಾರ್ ಅವರಿಂದ ಬಿಡಿಸಿಕೊಳ್ಳುವಂತೆ ಸಿದ್ದಲಿಂಗಪ್ಪ ಅವರಿಗೆ ನೋಟಿಸ್ ನೀಡಿದ್ದರೂ, ಅವರು ಅದನ್ನು ಬಿಡಿಸಿಕೊಳ್ಳದ ಕಾರಣ, ಹರಾಜು ಪ್ರಕ್ರಿಯೆ ನಡೆಸಲಾಯಿತು. ಆಗ ಸಿದ್ದಾಚಾರ್ ಎಂಬುವರು ಬಳೆಗಳನ್ನು ಪರೀಕ್ಷಿಸಿ ಇದು ತಾಮ್ರದ್ದೆಂದೂ, ಮೇಲೆ ಚಿನ್ನದ ಕೋಟ್‌ನ ಹಾಕಲಾಗಿದೆ ಎಂದೂ ಹೇಳಿದ್ದಾರೆ. ಇದಾದ ಬಳಿಕ ವೀರಭದ್ರ ಜ್ಯೂಯಲಱ್ಸ್‌ನ ಶಂಭುಲಿಂಗ ಅವರಿಂದ ಪರೀಕ್ಷಿಸಿ, ಇದು ಚಿನ್ನದ ಬಳೆಗಳಲ್ಲವೆಂದು ದೃಢೀಕರಣ ಪತ್ರ ಪಡೆಯಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನಮ್ಮ ಬ್ಯಾಂಕ್‌ನ ಅಧಿಕೃತ ಅಪ್ರೈಸರ್ ಆದ ಪವನ್ ಮತ್ತು ರವಿಕುಮಾರ್ ಒಂದು ಲಕ್ಷ ರೂ. ಬೆಲೆಯ ಚಿನ್ನವಲ್ಲದ ಆಭರಣಗಳನ್ನು ಚಿನ್ನದ್ದೆಂದು ದೃಢೀಕರಿಸಿ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾರೆ. ಅದೇ ರೀತಿ ಒಡವೆಗಳ ಮಾಲೀಕ ಸಿದ್ದಲಿಂಗಪ್ಪ ನಕಲಿ ಚಿನ್ನದ ಬಳೆಗಳೆಂದು ಗೊತ್ತಿದ್ದರೂ ಸಹ ಚಿನ್ನದ ಒಡವೆಗಳೆಂದು ಅಪ್ರೈಸರ್ ಪವನ್ ಮತ್ತು ರವಿಕುಮಾರ್ ಅವರ ಜತೆ ಸೇರಿ ನಮ್ಮ ಬ್ಯಾಂಕ್‌ಲ್ಲಿ ಪಡೆದಿರುವ ಸಾಲ ಮತ್ತು ಬಡ್ಡಿ ಸೇರಿ 1,52,000 ರೂ. ಮೋಸ ಮಾಡಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ದೂರಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment