ಬೌನ್ಸ್ ಬೈಕ್‌ಗೆ ಮೊದಲ ವರ್ಷದ ಸಂಭ್ರಮ

 

ಸವಾರರಿಗೆ ಅತಿ ಹೆಚ್ಚು ಅನುಕೂಲ ಮಾಡಿಕೊಟ್ಟ ಬೌನ್ಸ್‌ಗೆ ಇದೀಗ ಮೊದಲ ವರ್ಷದ ಸಂಭ್ರಮ. ಸದ್ಯ ಸಿಲಿಕಾನ್ ಸಿಟಿಯಲ್ಲಿ ಓಡಾಡಲು ಬೈಕ್ ಇಲ್ಲ ಎಂದು ಕೊರಗುತ್ತಿದ್ದವರೆಗೆ ಸಮಾಧಾನ ತಂದ ಬೌನ್ಸ್ ತನ್ನ ಮೊದಲ ವರ್ಷದಲ್ಲೇ ಲಕ್ಷಾಂತರ ಮಂದಿಗೆ ಆಸರೆಯಾಗಿದೆ ಎಂದರೆ ತಪ್ಪಾಗಲಾರದು.

ಭಾರತದ ಮೊದಲ ಮತ್ತು ವೇಗವಾಗಿ ಬೆಳೆಯುತ್ತಿರುವ ಡಾಕ್‌ಲೆಸ್ ಬೈಕ್ ಹಂಚಿಕೆ ಕಂಪನಿಯಾದ ಬೌನ್ಸ್, ಬೆಂಗಳೂರಿನಲ್ಲಿ ದಿನಕ್ಕೆ ೧ ಲಕ್ಷ ಸವಾರಿಗಳ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಬೌನ್ಸ್ ತನ್ನ ಡಾಕ್‌ಲೆಸ್ ಕೊಡುಗೆಯನ್ನು ಪ್ರಾರಂಭಿಸಿದ ೧೩ ತಿಂಗಳಲ್ಲಿ, ನಗರದಲ್ಲಿ ೧೦ ಮಿಲಿಯನ್ ವಹಿವಾಟುಗಳನ್ನು ಪೂರ್ಣಗೊಳಿಸಿದ್ದು, ಅವರ ೯೫೦೦ ಸ್ಕೂಟರ್‌ಗಳೊಂದಿಗೆ ೭೦ ದಶಲಕ್ಷಕ್ಕೂ ಹೆಚ್ಚು ಕಿಲೋಮೀಟರ್‌ಗಳನ್ನು ಪೂರ್ಣಗೊಳಿಸಿರುವುದು ನಿಜಕ್ಕೂ ಗಮನಾರ್ಹ

ಸಂಸ್ಥೆ ಪ್ರಾರಂಭವಾದಾಗಿನಿಂದ ದೊಡ್ಡ ಮಟ್ಟದ ಬೆಳವಣಿಗೆಯನ್ನು ಕಂಡಿದ್ದು, ಇಂದು ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್‌ಗಳಲ್ಲಿ ಒಂದಾಗಿದೆ, ಭಾರತದಲ್ಲಿ ಕೇವಲ ೧೮% ಜನಸಂಖ್ಯೆಯು ಸ್ವಂತ ವಾಹನವನ್ನು ಹೊಂದಿದ್ದು, ಉಳಿದ ೮೨% ಜನರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಹಂಚಿದ ಮತ್ತು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ. ಆದರೆ, ನಗರದ ಯೋಜನೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ, ದೇಶದ ಹೆಚ್ಚಿನ ಭಾಗಗಳಲ್ಲಿ ಸಾರಿಗೆ ವ್ಯವಸ್ಥೆ ಮುರಿದುಬಿದ್ದಿದೆ. ಮೊದಲಿನಿಂದ-ಕೊನೆಯವರೆಗಿನ ಮೈಲಿಯ ಸಂಪರ್ಕಕ್ಕಾಗಿ ಹಂಚಿಕೆಯ ಸಾರಿಗೆ ಮತ್ತು ದೂರದ ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುವ ಮೂಲಕ ನಾಗರಿಕರಿಗೆ ಅನುಕೂಲಕರವಾದ, ಕೈಗೆಟುಕುವ ಮತ್ತು ಸಮಯ ಪರಿಣಾಮಕಾರಿ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಉದ್ದೇಶವನ್ನು ಬೌನ್ಸ್ ಹೊಂದಿದೆ.

ಬೌನ್ಸ್ ಸ್ಕೂಟರ್‌ಗಳು ಪ್ರಯಾಣದ ಅತ್ಯಂತ ಒಳ್ಳೆಯ ವಿಧಾನಗಳಲ್ಲಿ ಒಂದಾಗಿದ್ದು, ಬಳಕೆದಾರರಿಗೆ ಪ್ರತಿ ಕಿ.ಮೀ.ಗೆ ೫ ರೂಪಾಯಿ ದರದಲ್ಲಿ ಸವಾರಿ ನೀಡುತ್ತಿದೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ತಮ್ಮ ಡಾಕ್‌ಲೆಸ್ ಮಾದರಿಯನ್ನು ಬಿಡುಗಡೆ ಮಾಡಿದ ನಂತರ, ಮುಂಬರುವ ವರ್ಷದಲ್ಲಿ ತನ್ನ ಕೊಡುಗೆಯನ್ನು ೧೦ ಮೆಟ್ರೋ ನಗರಗಳಿಗೆ ವಿಸ್ತರಿಸಲು ಕಂಪನಿ ಯೋಜಿಸಿದೆ. ಹಾಗೂ ಪ್ರಯಾಣದ ದರವನ್ನು ಮತ್ತಷ್ಟು ಅಗ್ಗವಾಗಿಸಲು ಪ್ರಯತ್ನಿಸುತ್ತಿದೆ.

ಬೌನ್ಸ್ ೨೦೧೪ರಲ್ಲಿ ಸ್ಥಾಪನೆ
ವಿವೇಕಾನಂದ ಹೆಚ್.ಆರ್. ಹಾಗೂ ಅನಿಲ್ ಜಿ ಮತ್ತು ವರುಣ್ ಅಗ್ನಿ ಅವರು ೨೦೧೪ ರಲ್ಲಿ ಸ್ಥಾಪಿಸಿದ ಈ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್, ಪ್ರಯಾಣಿಕರನ್ನು ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸಲು ಹಾಗೂ ಸಂಚಾರಿ ದಟ್ಟನೆಯನ್ನು ಕುಗ್ಗಿಸುವ ಗುರಿಯನ್ನು ಹೊಂದಿದೆ. ಪೇಟೆಂಟ್ ಪಡೆದಂತಹ ಕೀ-ಲೆಸ್ ತಂತ್ರಜ್ಞಾನದೊಂದಿಗೆ, ಬೌನ್ಸ್ ಬಳಕೆದಾರರು ಯಾವುದೇ ಸಮಯದಲ್ಲಿ ನಗರದಲ್ಲಿ ಎಲ್ಲಿಯಾದರೂ ಬೈಕುಗಳು, ಬೈಸಿಕಲ್‌ಗಳು ಅಥವಾ ಎಲೆಕ್ಟ್ರಿಕ್ ಬೈಕುಗಳನ್ನು ತೆಗೆದುಕೊಳ್ಳಬಹುದು/ಬಿಡಬಹುದಾಗಿದೆ.

ಬೌನ್ಸ್‌ಗೆ ಕಿಡಿಗೇಡಿಗಳ ಕಾಟ
ಉದ್ಯಾನನಗರಿಯಲ್ಲಿ ಬೌನ್ಸ್ ಬೈಕ್ ಬಹುಬೇಗ ಜನಪ್ರಿಯವಾಗಿದ್ದು ಸಂತಸ ತಂದರೆ, ಅದನ್ನು ಕೆಲ ಸವಾರರು ದುರುಪಯೋಗ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ. ಬೌನ್ಸ್ ನಲ್ಲಿ ಪೆಟ್ರೋಲ್ ಕಳವು ಮಾಡುವುದು, ಚರಂಡಿಗೆ ಎಸೆಯುವುದು, ಹೆಲ್ಮೆಟೆ ಕದಿಯುವುದು ಸೇರಿದಂತೆ ಅನೇಕ ರೀತಿಯ ತೊಂದರೆಗಳನ್ನು ಕೆಲ ಕಿಡಿಗೇಡಿಗಳಿಂದ ಸಂಸ್ಥೆ ಎದುರಿಸಿದೆ. ಇಂತಹ ಉತ್ತಮ ಯೋಜನೆಗೆ ಜನರು ಪ್ರೋತ್ಸಾಹಿಸುವ ಬದಲು ಸಮಸ್ಯೆ ನೀಡುವುದು ಎಷ್ಟು ಮಾತ್ರ ಸರಿ ಅಲ್ಲವೇ.

Leave a Comment