ಬೋಸರಾಜು ಫೌಂಡೇಷನ್ : ರಂಜಾನ್ ಕಿಟ್ ವಿತರಣೆ

ರಾಯಚೂರು.ಮೇ.23- ಪವಿತ್ರ ರಂಜಾನ್ ಪ್ರಯುಕ್ತ ಇಂದು ನಗರದ ವಾರ್ಡ್ 8 ಕೋಟ್ ತಲಾರ್‌ನಲ್ಲಿ ಎನ್.ಎಸ್.ಬೋಸರಾಜು ಫೌಂಡೇಷನ್ ವತಿಯಿಂದ ಆಹಾರ ಧಾನ್ಯ ಕಿಟ್ ವಿತರಿಸಲಾಯಿತು.
ಸುಮಾರು 10 ಸಾವಿರ ಕಿಟ್ ನಗರದ ವಿವಿಧ ವಾರ್ಡ್‌ಗಳಲ್ಲಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸ್ವತಃ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಕೋಟ್ ತಲಾರ್‌ನಲ್ಲಿ ಕಿಟ್ ಮುಸ್ಲೀಂ ಬಾಂಧವರಿಗೆ ನೀಡುವ ಮೂಲಕ ಕೋಮು ಸೌಹಾರ್ದತೆ ಮತ್ತು ಮಾನವೀಯತೆ ಮೆರೆದರು. ಕಿಟ್ ವಿತರಿಸುವ ಪೂರ್ವ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ, ವ್ಯವಸ್ಥಿತವಾಗಿ ಕಿಟ್ ವಿತರಿಸಲಾಯಿತು.
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಮೂಲಕ ಕಿಟ್ ಪ್ರತಿಯೊಬ್ಬರಿಗೂ ತಲುಪಿಸಲಾಯಿತು. ಇಂದಿನಿಂದ ರಂಜಾನ್ ಹಬ್ಬದ ಎಲ್ಲಾ ಕಿಟ್‌ಗಳು ಅವರವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಈ ಕಿಟ್ ವಿತರಣೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಕಳೆದ ಒಂದು ವಾರದಿಂದ ವ್ಯವಸ್ಥಿತವಾಗಿ ಕಿಟ್ ಸಿದ್ಧಪಡಿಸಿ ಮನೆ ಮನೆಗೆ ತಲುಪಿಸಲು ತಂಡಗಳನ್ನು ರಚಿಸಲಾಗಿದೆ. ಪ್ರತಿ ವಾರ್ಡಿನಲ್ಲೂ ಮನೆ ಮನೆಗೆ ಕಿಟ್ ನೀಡುವ ಪ್ರಕ್ರಿಯೆ ಮುಂಜಾನೆಯಿಂದ ಆರಂಭಗೊಂಡಿದೆ.
ಕೋಟ್ ತಲಾರ್ ಕಾರ್ಯಕ್ರಮದಲ್ಲಿ ವಾರ್ಡಿನ ನಗರಸಭೆ ಸದಸ್ಯರಾದ ಮಕ್ಬೂಲ್, ಕಾಂಗ್ರೆಸ್ ಮುಖಂಡರಾದ ಬಸವರಾಜ ರೆಡ್ಡಿ, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಜಾವೀದ್ ಉಲ್ ಹಕ್, ನಜೀರ್ ಪಂಜಾಬಿ, ಅಬ್ದುಲ್ ಕರೀಂ, ರುದ್ರಪ್ಪ ಅಂಗ‌ಡಿ, ಬಸವರಾಜ ಪಾಟೀಲ್ ಅತ್ತನೂರು, ಶಂಶುದ್ದೀನ್, ನಗರಸಭೆ ಸದಸ್ಯರಾದ ಜಯಣ್ಣ, ದರೂರು ಬಸವರಾಜ, ವಾಹೀದ್, ಸಾಜೀದ್ ಸಮೀರ್, ಶಾಲಂ, ಜಿ.ತಿಮ್ಮಾರೆಡ್ಡಿ, ಶ್ರೀನಿವಾಸ ರೆಡ್ಡಿ, ರವಿ ಬೋಸರಾಜು ಹಾಗೂ ರಜಾಕ್ ಉಸ್ತಾದ್ ಅವರು ಉಪಸ್ಥಿತರಿದ್ದರು.

Leave a Comment