ಬೋಟ್ ಚಾಲಕನ ಕೊಲೆ ಶಂಕೆ

 

ಬಂದರಿನಲ್ಲಿ ಘಟನೆ, ಸಿಸಿಟಿವಿ ಪರಿಶೀಲನೆ

 

ಮಂಗಳೂರು, ಡಿ.೬- ಕಳೆದ ೧೫ ವರ್ಷಗಳಿಂದ ನಗರದ ಹಳೆಬಂದರು ದಕ್ಕೆಯಲ್ಲಿ ಬೋಟ್ ಚಾಲಕನಾಗಿ ದುಡಿಯುತ್ತಿದ್ದ ತಮಿಳ್ನಾಡು-ತಾಂಜಾವೂರು ನಿವಾಸಿ ಮುಹಮ್ಮದ್ ಇಬ್ರಾಹಿಂ(೪೫) ಮೃತದೇಹ ಇಂದು ಮುಂಜಾನೆ ದಕ್ಕೆ ಗೇಟ್ ಬಳಿಯ ಕಟ್ಟಡವೊಂದರ ಓಣಿಯಲ್ಲಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ತಲೆಗೂದಲು ಕಿತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವಾಚ್ ಕೆಲವು ಮೀಟರ್ ದೂರದಲ್ಲಿ ಪತ್ತೆಯಾಗಿದೆ. ದೇಹದಲ್ಲಿ ಮೇಲ್ನೋಟಕ್ಕೆ ಯಾವುದೇ ಗಾಯ ಕಂಡುಬಾರದೇ ಇದ್ದು ತನಿಖೆಗಾಗಿ ಪಕ್ಕದ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿ ಟಿವಿಯ ಫುಟೇಜ್ ಪರಿಶೀಲಿಸಲಾಗುತ್ತಿದೆ.

 

ಮುಹಮ್ಮದ್ ಇಬ್ರಾಹಿಂ ಅವರು ದಕ್ಕೆಯಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಬಾಡಿಗೆ ರೂಮಿನಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಘಟನೆ ನಡೆದಿರಬೇಕೆಂದು ಶಂಕಿಸಲಾಗಿದೆ. ವಿಪರೀತ ಮದ್ಯ ಸೇವಿಸಿದ್ದ ಅವರು ಅನಾರೋಗ್ಯ ಕಾರಣದಿಂದ ಮೃತಪಟ್ಟರೇ, ಕೊಲೆಗೈಯಲಾಯಿತೇ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ತಲೆಗೂದಲು ಕಿತ್ತಿರುವ ಕಾರಣ ಘಟನೆಗೂ ಮುನ್ನ ಹೊಡೆದಾಟ ನಡೆದಿರುವ ಸಾಧ್ಯತೆಯೂ ಇದೆ. ಪಕ್ಕದ ಕಟ್ಟಡದಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದರೂ ಅದರ ಹಿಂಭಾಗ ಘಟನೆ ನಡೆದಿರುವ ಕಾರಣ ತನಿಖೆಗೆ ಪೂರಕವಾಗುವ ಸಾಧ್ಯತೆ ಕಡಿಮೆ. ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವೆನ್ಲಾಕ್ ಶವಾಗಾರದಲ್ಲಿರಿಸಲಾಗಿದ್ದು ಮನೆಯವರಿಗೆ ಮಾಹಿತಿ ನೀಡಲಾಗಿದೆ.

Leave a Comment