‘ಬೈದೆತಿ ಅವಮಾನದ ಹಿಂದೆ ಕೆಎಫ್‌ಡಿ ಕೈವಾಡ’ 

ಪುತ್ತೂರು, ಹಿಂದೂ ಸಮಾಜದ ಮೇಲೆ ಅನ್ಯಾಯ ಮತ್ತು ಅಪಮಾನಗಳನ್ನು ನಡೆಸುತ್ತಿರುವುದು ಖಂಡನೀಯವಾಗಿದೆ. ಮಾತೆ ದೇಯಿ ಬೈದತಿ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬಂಧಿತನಾಗಿದ್ದರೂ ಆತನಿಗೆ ಸಹಕರಿಸಿದ ಹಲವರ ಬಂಧನವಾಗಿಲ್ಲ. ಇವರನ್ನು ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಸುರೇಶ್ ಕಣೆಮರಡ್ಕ ಅವರು  ಆರೋಪಿಸಿದರು.

ಪುತ್ತೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂಧ ವ್ಯಕ್ತಿಯು ದೇಯಿ ಬೈದೆತಿಯ ಪುತ್ತಳಿಗೆ ಅವಮಾನ ಮಾಡಿರುವುದು ಹಿಂದೂ ಸಮಾಜಕ್ಕೆ ಮಾಡಿದ ಅಪಮಾನವಾಗಿದ್ದು, ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದ ಕೃತ್ಯವಾಗಿದೆ. ಇದು ಒಬ್ಬ ನಡೆಸಿದ ಕೃತ್ಯವಾಗಿರದೆ ಇದರ ಹಿಂದೆ ಕಾಂಗ್ರೆಸ್ ಮತ್ತು ಕೆಎಫ್‌ಡಿ, ಎಸ್‌ಡಿಪಿಐ ಸಂಘಟನೆಗಳ ಕೈವಾಡವಿದೆ ಎಂದು ಅವರು ಆರೋಪಿಸಿದರು. ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಅವರು ಮಾತನಾಡಿ  ಬಿಲ್ಲವ ಸಂಘಟನೆಗಳಾದ ರಾಷ್ಟ್ರೀಯ ಬಿಲ್ಲವ ಮಹಾಮಂಡಲ,ಅಖಿಲ ಭಾರತ ಬಿಲ್ಲವ ಯೂನಿಯನ್, ಬಿಲ್ಲವ ಯುವವಾಹಿನಿ, ಯುವವೇದಿಕೆ ಸೇರಿದಂತೆ ಎಲ್ಲಾ ಬಿಲ್ಲವ ಸಂಘಟನೆಗಳು, ಬಿಲ್ಲವ ಸಮಾಜದ ಮುಖಂಡರುಗಳು  ಈ ಕೃತ್ಯದ ವಿರುದ್ಧ ಹೋರಾಟ ನಡೆಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ನೀತಿಯಿಂದಾಗಿ ಕೆಲವು ಮತೀಯ ಸಂಘಟನೆಗಳು ಹಿಂದೂ ಸಮಾಜಕ್ಕೆ ಅಪಮಾನ ಮಾಡುವ, ಹಿಂದೂ ಧರ್ಮದ ಮೇಲೆ ಸವಾರಿ ಮಾಡುವ ಕೆಲಸ ನಿರಂತರ ನಡೆಸುತ್ತಾ ಬಂದಿದೆ. ಬಿಲ್ಲವ ಸಮಾಜದ ಎಲ್ಲರೂ ಈ ವಿಚಾರವಾಗಿ ರಾಜಕೀಯ ಬೇಧಗಳನ್ನು ಮರೆತು ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನಗರ ಮಂಡಲ ಅಧ್ಯಕ್ಷ ಸುಂದರ ಪೂಜಾರಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಹಾಜರಿದ್ದರು.

Leave a Comment