ಬೈಕ್ ಡಿಕ್ಕಿ: ಬಾಲಕ ಮೃತ್ಯು

ಪುತ್ತೂರು, ಜ.೨೪- ಜಾತ್ರೋತ್ಸವ ಮುಗಿಸಿಕೊಂಡು ಹೆತ್ತವರ ಜತೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬೈಕೊಂದು ಡಿಕ್ಕಿ ಹೊಡೆದು ಬಾಲಕನೊಬ್ಬ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಬಾಯಂಬಾಡಿ ಎಂಬಲ್ಲಿ ಅಮ್ಚಿನಡ್ಕ-ನೆಟ್ಟಾರು ರಸ್ತೆಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಕೊಳ್ತಿಗೆ ಗ್ರಾಮದ ಎಕ್ಕಡ ನಿವಾಸಿ ಮೋಹನ್ ಮತ್ತು ಶೇಷಮ್ಮ ದಂಪತಿ ಪುತ್ರ ಅನಿನಾಶ್ (೧೦) ಮೃತಪಟ್ಟ ಬಾಲಕ. ಬಾಯಂಬಾಡಿ ಸುಬ್ರಹ್ಮಣ್ಯ ದೇವಳದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಹೆತ್ತವರ ಜತೆ ಬುಧವಾರ ರಾತ್ರಿ ಜಾತ್ರೆಗೆ ತೆರಳಿದ್ದ ಅವಿನಾಶ್ ಜಾತ್ರೆ ಮುಗಿಸಿಕೊಂಡು ಹೆತ್ತವರ ಜತೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮನೆಗೆ ಹಿಂತಿರುಗುತ್ತಿದ್ದ ವೇಳೆ ಅವಿನಾಶ್ ಬಾಯಂಬಾಡಿ ಸಮೀಪ ರಸ್ತೆ ಬದಿಯ ಪೊದೆಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ನೆಟ್ಟಾರು ಕಡೆಯಿಂದ ಬಂದ ಬೈಕೊಂದು ಆತನಿಗೆ ಡಿಕ್ಕಿ ಹೊಡೆದಿದ್ದು, ಅಪಘಾತ ಎಸಗಿದ ಬೈಕ್ ಚಾಲಕ ಬಾಲಕನ ಚಿಕಿತ್ಸೆಗೆ ಸಹಕರಿಸದೆ ಅಲ್ಲಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಘಟನೆಯಲ್ಲಿ ತಲೆ, ಮುಖ ಮತ್ತು ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದ ಬಾಲಕನನ್ನು ಬೆಳ್ಳಾರೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಯ ಹಿನ್ನಲೆಯಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆಯೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment