ಬೈಕ್-ಕಾರ್ ನಡುವೆ ಮುಖಾಮುಖಿ ಡಿಕ್ಕಿ: ಐದು ಮಂದಿಗೆ ಗಾಯ

ಮಧುಗಿರಿ, ಜ. ೪- ದ್ವಿಚಕ್ರ ವಾಹನ ಮತ್ತು ಓಮಿನಿ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಐದು ಮಂದಿ ತೀವ್ರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಸವನಹಳ್ಳಿ ಸಮೀಪ ನಡೆದಿದೆ.

ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ನೇರಳೆಕೆರೆ ಗ್ರಾಮದ ವಡ್ಡರಹಟ್ಟಿಯ ನಿವಾಸಿಗಳಾದ ರವಿ(32) ಮತ್ತು ಮಂಜುನಾಥ್ (30) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಪಟ್ಟಣದಿಂದ ನೇರಳೆಕೆರೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಪಾವಗಡ ಮಾರ್ಗವಾಗಿ ಬಂದ ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇವರಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಓಮಿನಿ ಕಾರಿನಲ್ಲಿದ್ದ ಕಂಭತ್ತನಹಳ್ಳಿಯ ಅಶ್ವಥ್, ಭೈರಣ್ಣ, ಲಿಂಗೇನಹಳ್ಳಿಯ ಹನುಮಂತಗೌಡ ಸಹ ಗಾಯಗೊಂಡಿದ್ದು, ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಮಧುಗಿರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment