ಬೈಕ್‌ನಲ್ಲಿ ತೆರಳುತ್ತಿದ್ದಾಗ ‘ವಿವೋ’ ಮೊಬೈಲ್ ಬ್ಲಾಸ್ಟ್ ಸವಾರನಿಗೆ ಗಂಭೀರ ಗಾಯ

ಮೈಸೂರು, ಫೆ.೧೮- ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡ ಪರಿಣಾಮ ಬೈಕ್ ಸವಾರರೋರ್ವರು ಕುಸಿದು ಬಿದ್ದು ಗಂಭೀರ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ರಸ್ತೆಯಲ್ಲಿ ನಡೆದಿದೆ. ಗಾಯಗೊಂಡವರನ್ನು ಕುರಿಹುಂಡಿಯ ಬಸವರಾಜು ಎಂದು ಗುರುತಿಸಲಾಗಿದ್ದು, ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಿಸೆಯಲ್ಲಿದ್ದ ವಿವೋ ಕಂಪನಿಯ ಮೊಬೈಲ್ ಸ್ಫೋಟಗೊಂಡಿದೆ. ಬಸವರಾಜು ಕುರಿಹುಂಡಿಯಿಂದ ಹುಲ್ಲಹಳ್ಳಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೊಬೈಲ್ ಸಿಡಿದ ರಭಸಕ್ಕೆ ಬಸವರಾಜು ಬೈಕ್‌ನಿಂದ ಕೆಳಗೆ ಬಿದ್ದಿದ್ದು ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದಾರೆ. ಸಾರ್ವಜನಿಕರು ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Comment