ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ: ದಂಪತಿ ಸಾವು

ಗುಬ್ಬಿ, ಸೆ. ೪- ಸಾರಿಗೆ ಸಂಸ್ಥೆ ಬಸ್ ಮತ್ತು ದ್ವಿಚಕ್ರ ವಾಹನ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿದ್ದು, ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಎಂ.ಹೆಚ್. ಪಟ್ಟಣದ ಪೆಟ್ರೋಲ್ ಬಂಕ್ ಸಮೀಪ ಇಂದು ಬೆಳಿಗ್ಗೆ ನಡೆದಿದೆ.
ಮೃತಪಟ್ಟವರನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೊಡ್ಡಎಣ್ಣೆಗೆರೆ ಗ್ರಾಮದ ದಂಪತಿಗಳಾದ ಈಶ್ವರಯ್ಯ (35) ಹಾಗೂ ಗಾಯತ್ರಿದೇವಿ (29) ಎಂದು ಗುರುತಿಸಲಾಗಿದೆ. ಇವರ ಪುತ್ರ ಕೀರ್ತಿ (9) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ದಂಪತಿಗಳು ಕೆ.ಬಿ. ಕ್ರಾಸ್ ಕಡೆಯಿಂದ ಗುಬ್ಬಿ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾ ಮಾರ್ಗಮಧ್ಯೆ ಎಂ.ಹೆಚ್. ಪಟ್ಟಣ ಸಮೀಪದ ಪೆಟ್ರೋಲ್ ಬಂಕ್ ಸಮೀಪ ತುಮಕೂರು ಕಡೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಮುಖಾಮುಖಿಯಾಗಿ ಅಪ್ಪಳಿಸಿದ್ದರಿಂದ ಈಶ್ವರಯ್ಯ ಸ್ಥಳದಲ್ಲೇ ಅಸುನೀಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಈತನ ಪತ್ನಿ ಗಾಯತ್ರಿರವರನ್ನು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಗುಬ್ಬಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

 

Leave a Comment