ಬೈಕ್‌ಗೆ ಲಾರಿ ಡಿಕ್ಕಿ: ದಂಪತಿ ಸಾವು

ತುಮಕೂರು, ಆ. ೧೭- ಮುಂದೆ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಅತಿ ವೇಗವಾಗಿ ಬಂದ ಲಾರಿ ಅಪ್ಪಳಿಸಿದ ಪರಿಣಾಮ ದಂಪತಿ ಮೃತಪಟ್ಟು, 6 ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲ್ಲೂಕಿನ ಕೋರಾ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಾಸಿಗಳಾದ ಜಗದೀಶ್ (32) ಹಾಗೂ ಗಂಗಾದೇವಿ (28) ಎಂಬುವರೇ ಮೃತಪಟ್ಟಿರುವ ದುರ್ದೈವಿ ದಂಪತಿ. ಇವರ 6 ವರ್ಷದ ಪುತ್ರಿ ಚಿನ್ಮಯಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಇವರು ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಸವಾಗಿದ್ದು, ನಿನ್ನೆ ಸಂಜೆ ದ್ವಿಚಕ್ರ ವಾಹನದಲ್ಲಿ ತಮ್ಮ 6 ವರ್ಷದ ಮಗಳು ಚಿನ್ಮಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹಿರಿಯೂರಿಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಕೋರಾ ಸಮೀಪದ ವಿ.ಆರ್.ಎಲ್. ಹೋಟೆಲ್ ಮುಂಭಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಲಾರಿ ಬೈಕ್‌ಗೆ ಅಪ್ಪಳಿಸಿದ್ದರಿಂದ ಪತಿ ಜಗದೀಶ್ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ಗಂಗಾಭಿಕ ಅವರು ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಕೋರಾ ಪಿಎಸ್ಐ ರವಿಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋರಾ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment