ಬೈಕ್‌ಗೆ ಬಸ್ ಡಿಕ್ಕಿ: ಸವಾರ ಸಾವು

ತುಮಕೂರು, ಜೂ. ೧೨- ದ್ವಿಚಕ್ರ ವಾಹನಕ್ಕೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟಿರುವ ವ್ಯಕ್ತಿಯನ್ನು ತಾಲ್ಲೂಕಿನ ಬೆಳ್ಳಾವಿ ಸಮೀಪದ ಕುರಿಕೆಂಪನಹಳ್ಳಿ ಗ್ರಾಮದ ಹನುಮಂತರಾಯಪ್ಪ (35) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಮಧುಗಿರಿ ತಾಲ್ಲೂಕಿನ ಪಡಸಾಲಹಟ್ಟಿ ಗ್ರಾಮದ ದಾಸೇಗೌಡ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇವರಿಬ್ಬರು ದ್ವಿಚಕ್ರ ವಾಹನದಲ್ಲಿ ತುಮಕೂರು ಕಡೆಯಿಂದ ಮಧುಗಿರಿ ತಾಲ್ಲೂಕಿನ ಪಡಸಾಲಹಟ್ಟಿ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಓಬಳಾಪುರ ಸಮೀಪ ಖಾಸಗಿ ಬಸ್ ಹಿಂದಿನಿಂದ ಬೈಕ್‌ಗೆ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಈ ಸಂಬಂಧ ಕೋರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment