ಬೈಕ್‌ಗೆ ಬಸ್ ಡಿಕ್ಕಿ ಯುವಕ ಸಾವು – ಇಬ್ಬರಿಗೆ ಗಾಯ

ಬೆಂಗಳೂರು, ಸೆ. ೬- ಹಿಂದಿನಿಂದ ವೇಗವಾಗಿ ಬಂದ ಕೆ‌ಎಸ್‌ಆರ್‌ಟಿಸಿ ಬಸ್ – ಮೂವರು ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ಓರ್ವ ಮೃತಪಟ್ಟರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಯಶವಂತಪುರದ ಎಸ್‌ಆರ್‌ಎಸ್ ಜಂಕ್ಷನ್‌ನಲ್ಲಿ ನಡೆದಿದೆ.
ಲಗ್ಗೆರೆಯ ಸುಹೇಲ್ ಪಾಷ (20) ಮೃತಪಟ್ಟವರು, ಗಾಯಗೊಂಡಿರುವ ಇಮ್ರಾನ್ ಹಾಗೂ ಸಿರಾಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಸಿರಾಜ್ ಸ್ಥಿತಿ ಚಿಂತಾಜನಕವಾಗಿದೆ.
ಟವರ್‌ಗಳ ರಿಪೇರಿ ಕೆಲಸ ಮಾ‌ಡುತ್ತಿದ್ದ ಈ ಮೂವರು ಲಗ್ಗೆರೆಯಲ್ಲಿ ವಾಸಿಸುತ್ತಿದ್ದು, ನಿನ್ನೆ ಬೆಳಿಗ್ಗೆ 6.30ರ ವೇಳೆ ಒಂದೇ ಬೈಕ್‌ನಲ್ಲಿ ಮೂವರು ಕೆಲಸಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಎಸ್‌ಆರ್‌ಎಸ್ ಸಿಗ್ನಲ್ ಬಳಿ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಸುಹೇಲ್ ಪಾಷ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರೆ, ಸಿರಾಜ್ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸಾವು – ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಇಮ್ರಾನ್ ಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಪ್ರಕರಣ ದಾಖಲಿಸಿರುವ ಯಶವಂತಪುರದ ಸಂಚಾರ ಪೊಲೀಸರು, ಬಸ್ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಸೌಮ್ಯಲತಾ ತಿಳಿಸಿದ್ದಾರೆ.
ಮಾಲೀಕ ಸಾವು
ಮೆಡಿಕಲ್ ಸ್ಟೋರ್ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದ ಮಾಲೀಕ ಮಲ್ಲಿಕಾರ್ಜುನ್ ಅವರು ಆಯತಪ್ಪಿಬಿದ್ದು ಮೃತಪಟ್ಟಿರುವ ದುರ್ಘಟನೆ ಕೆ.ಆರ್. ರಸ್ತೆಯಲ್ಲಿ ನಿನ್ನೆರಾತ್ರಿ ನಡೆದಿದೆ.
ಕೆ.ಆರ್. ರಸ್ತೆ ಬಳಿಯ ಮನೆಗೆ ರಾತ್ರಿ 9.30ರ ವೇಳೆ ಮಲ್ಲಿಕಾರ್ಜುನ್ (66) ಅವರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬನಶಂಕರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment