ಬೈಕ್‌ಗೆ ಪಿಕಪ್ ಡಿಕ್ಕಿ: ಸವಾರ ಗಂಭೀರ

ಬಂಟ್ವಾಳ, ಜೂ. ೨೪- ಚಾಲಕನ ನಿಯಂತ್ರಣ ಕಳೆದು ಪಿಕಪ್ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಪೆರುವಾಯಿ ಸೇತುವೆಯಲ್ಲಿ ನಿನ್ನೆ ನಡೆದಿದೆ.
ಪೆರುವಾಯಿ ನಿವಾಸಿ, ಬೈಕ್ ಸವಾರ ಕೃಷ್ಣಪ್ಪ ಪೂಜಾರಿ (೩೮), ಮಾಂಬಾಡಿ ನಿವಾಸಿ, ಕುಡ್ತಮುಗೇರು ಸರಕಾರಿ ಶಾಲಾ ಶಿಕ್ಷಕ ಅಶೋಕ್ (೩೨) ಗಾಯಗೊಂಡವರು. ಗಾಯಾಳುಗಳು ವಿಟ್ಲ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು, ಹೆಚ್ಚುವರಿ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೆರುವಾಯಿ ಜಂಕ್ಷನ್ ಕಡೆಯಿಂದ ಮಾಣಿಲಕ್ಕೆ ಹೋಗುತ್ತಿದ್ದ ಪಿಕಪ್ ಇಳಿಜಾರಿನಲ್ಲಿ ಚಾಲಕ ನಿಯಂತ್ರಣ ತಪ್ಪಿದ್ದು, ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿಯಾಗಿದೆ. ಬೈಕ್ ರಸ್ತೆಯ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದು, ಪಿಕಪ್ ಮುಂದಕ್ಕೆ ಚಲಿಸಿ ಸೇತುವೆಯ ಕಂಬಕ್ಕೆ ಢಿಕ್ಕಿಯಾಗಿದೆ. ಪಿಕಪ್ ವಾಹನ ಚಕ್ರ ಒಡೆದು, ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬೈಕ್‌ಗೆ ಹಾನಿಯಾಗಿದೆ. ಶಿಕ್ಷಕ ಅಶೋಕ್ ಪೆರುವಾಯಿಯಲ್ಲಿರುವ ಮಾವನ ಮನೆಗೆ ಬಂದಿದ್ದು, ಪೇಟೆಯ ಕಡೆಗೆ ಹೊರಟ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment