ಬೈಕ್‌ಗಳೆರಡರ ನಡುವೆ ಡಿಕ್ಕಿ

ನಾಲ್ವರು ಗಂಭೀರ
ಪುತ್ತೂರು, ಸೆ.೧೨- ಬೈಕ್‌ಗಳೆರಡರ ನಡುವೆ ಡಿಕ್ಕಿ ಸಂಭವಿಸಿ ಸವಾರರು ಹಾಗೂ ಸಹ ಸವಾರೆಯರಿಬ್ಬರ ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಮುಕ್ವೆ ಎಂಬಲ್ಲಿ ಪುತ್ತೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ ನಿನ್ನೆ ಸಂಭವಿಸಿದೆ.
ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಕಟ್ಟತ್ತಡ್ಕ ನಿವಾಸಿ ಕುಟ್ಟಿ ಎಂ.ಕೆ(೫೦) ಮತ್ತು ಅವರ ಪುತ್ರಿ ಶರತ್‌ಕುಮಾರಿ, ಇನ್ನೊಂದು ಬೈಕಿನ ಸವಾರ ನರಿಮೊಗ್ರು ಗ್ರಾಮದ ಪರಮಾರ್ಗ ನಿವಾಸಿ ಯೋಗೀಶ್ ಗೌಡ (೪೦) ಮತ್ತು ಸಹ ಸವಾರೆ ಹರಿಣಾಕ್ಷಿ ಗಾಯಗೊಂಡವರು.
ಕುಟ್ಟಿ ಎಂಕೆ ಅವರು ತನ್ನ ಪುತ್ರಿ ಶರತ್‌ಕುಮಾರಿ ಅವರನ್ನು ಬೈಕಿನ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಗೆ ಬರುತ್ತಿದ್ದ ವೇಳೆ ಯೋಗೀಶ್ ಗೌಡ ಅವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಹಿಂಬದಿಯಿಂದ ಬಂದು ಮುಕ್ವೆ ಪ್ರಯಾಣಿಕರ ಬಸ್ ತಂಗುದಾಣದ ಬಳಿ ಹಿಂದಿನಿಂದ ಡಿಕ್ಕಿ ಹೊಡೆದಿರುವುದಾಗಿ ಆರೋಪಿಸಲಾಗಿದೆ.
ಗಂಭೀರ ಗಾಯಗೊಂಡಿರುವ ನಾಲ್ವರ ಪೈಕಿ ಕುಟ್ಟಿ ಮತ್ತು ಶರತ್‌ಕುಮಾರಿ ಅವರನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಹಾಗೂ ಯೋಗೀಶ್ ಗೌಡ ಮತ್ತು ಹರಿಣಾಕ್ಷಿ ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Comment