ಬೇಸಿಗೆ ಬೇಗೆಗೆ ತಂಪಾಗಿಸುವ ಹಣ್ಣುಗಳು

ಬಿರುಬೇಸಿಗೆಯ ಅನುಭವ ಬೆಂಗಳೂರು ಸೇರಿದಂತೆ, ರಾಜ್ಯದಲ್ಲೆಡೆ ಜನರಿಗಾಗುತ್ತಿದೆ. ಬಿಸಿಲಿನ ಝಳ ಹೆಚ್ಚಾದಂತೆ ದೇಹ ನಿರ್ಜಲೀಕರಣದತ್ತ ಸಾಗುತ್ತಿರುತ್ತದೆ. ಹಾಗಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸುವುದು ಅಗತ್ಯ.

ಪ್ರಕೃತಿ, ಆಯಾ ಋತುಮಾನಕ್ಕೆ ತಕ್ಕಂತೆ ತನ್ನ ಮಡಿಲಿನಿಂದ ಹಣ್ಣು ಹಂಪಲುಗಳನ್ನು ನೀಡುತ್ತಾ ಬಂದಿದೆ. ಬಿರುಬೇಸಿಗೆ ಬಂದಾಕ್ಷಣ, ಎಳನೀರು, ಕಲ್ಲಂಗಡಿ ಹಣ್ಣು, ಕರ್ಬೂಜಾ, ಸೌತೆಕಾಯಿ, ಮುಂತಾದ ಹಣ್ಣುಗಳು ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ದೊರೆಯಲಿವೆ.

ಇವೆಲ್ಲಾ ಕೆಲವೊಮ್ಮೆ ದುಬಾರಿಯೆನಿಸಿದರೂ, ದೇಹದ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾದರೂ ಖರೀದಿ ಮಾಡಲೇಬೇಕಾಗುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿ ಒಂದು ಎಳನೀರಿನ ಬೆಲೆ ಮೂವತ್ತು ರೂ. ಗಳಿಂದ ಮೂವತ್ತೈದರವರೆಗೂ ಇದೆ. ಕೆಲವು ಪ್ರದೇಶಗಳಲ್ಲಿ ಹೆಚ್ಚು – ಕಡಿಮೆ ಇರಬಹುದು. ಆದರೆ ಎಳನೀರಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಅದೇ ರೀತಿ ಕಲ್ಲಂಗಡಿ ಹಣ್ಣು, ಕರ್ಬೂಜಾ ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ.

ಬಿಸಿಲಿನ ತಾಪದಿಂದ ದೇಹ ಕಳೆದುಕೊಳ್ಳುವ ನೀರಿನಾಂಶವನ್ನು ಎಳನೀರು ಮತ್ತೆ ತುಂಬಿಕೊಡಲಿದೆ ಹಾಗೂ ಖನಿಜಾಂಶಗಳನ್ನು ಒದಗಿಸುತ್ತದೆ. ಎಳನೀರಿನಲ್ಲಿ ಅಧಿಕ ಪ್ರಮಾಣದಲ್ಲಿ `ಎಲೆಕ್ಟ್ರೋಲೈಟ್’ ಎಂಬ ಅಂಶಗಳಿರುತ್ತವೆ.

ಬೇಸಿಗೆಯಲ್ಲಿ ಮಜ್ಜಿಗೆಯನ್ನು ಹೆಚ್ಚಾಗಿ ಕುಡಿಯುವುದರಿಂದ ದೇಹ ತಂಪಾಗುತ್ತದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲೂ ಮಜ್ಜಿಗೆ ಕುಡಿಯುವುದು ಒಳ್ಳೆಯದು. ಮಜ್ಜಿಗೆ ಕೇವಲ ದೇಹವನ್ನು ತಂಪಾಗಿಸಲಿದ್ದು, ಜೀರ್ಣಕ್ರಿಯೆ ಉತ್ತಮಗೊಳ್ಳಲಿಕ್ಕೂ ನೆರವಾಗಲಿದೆ.

ಮನೆಯಿಂದ ಹೊರಗೆ ಮಜ್ಜಿಗೆ ಕುಡಿಯುವಾಗ ಎಚ್ಚರ ವಹಿಸುವುದು ಅಗತ್ಯ. ಮಜ್ಜಿಗೆ ತಯಾರಿಸಲು ಬಳಸಬಹುದಾದ ನೀರಿನ ಬಗ್ಗೆ ಎಚ್ಚರ ಅಗತ್ಯ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಖಾಯಿಲೆ – ಕಸರೆಗಳು ಬರುವುದೇ ನೀರಿನಿಂದ, ಹಾಗಾಗಿ ಎಚ್ಚರವಿರಲಿ.

ಕಲ್ಲಂಗಡಿ ಹಣ್ಣಿನಲ್ಲಿ ಯಥೇಚ್ಛವಾಗಿ ನೀರಿನಾಂಶ ಇರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಬೇಸಿಗೆಯಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬಳಸುವುದರಿಂದ ದೇಹ ತಂಪಾಗಿರುತ್ತದೆ. ನೀರಿನ ದಾಹ ಕಡಿಮೆಯಾಗಲಿದೆ. ಆರೋಗ್ಯ ಸುಧಾರಣೆಗೂ ಸಹಕಾರಿಯಾಗಲಿದೆ.

ಇವೆಲ್ಲದರ ಜತೆಗೆ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಉಷ್ಣಾಂಶ ಕಡಿಮೆಯಾಗುತ್ತದೆ. ಜ್ಯೂಸ್ ಮಾಡಿಕೊಳ್ಳಲು ಸಮಯದ ಅಭಾವ ಇದ್ದಲ್ಲಿ, ದಾಳಿಂಬೆ ಹಣ್ಣಿನ ಬೀಜಗಳನ್ನು ನೇರವಾಗಿ ತಿನ್ನಬಹುದು. ಮುಂಜಾನೆ ವೇಳೆ ತಿಂದರೆ ಒಳ್ಳೆಯದೆಂದು ವೈದ್ಯರೂ ಹೇಳುತ್ತಾರೆ. ಕರ್ಬೂಜಾ ಜ್ಯೂಸ್ ಕೂಡ ದೇಹವನ್ನು ತಂಪಾಗಿಸುತ್ತದೆ. ಈ ಹಣ್ಣು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯಲಿದ್ದು, ಅದನ್ನು ಕತ್ತರಿಸಿ ತಿನ್ನಬಹುದು ಅಥವಾ ಜ್ಯೂಸ್ ಮಾಡಿಯೂ ಸೇವಿಸಬಹುದು.

ಇನ್ನು ದೇಹದ ಉಷ್ಣತೆ ಕಡಿಮೆ ಮಾಡಲು ಮನೆಯಲ್ಲೇ ತಯಾರು ಮಾಡಬಹುದಾದ ಮದ್ದುಗಳೂ ಇವೆ. ಮೆಂತ್ಯಯಿಂದ ತಯಾರಿಸಿದ ಗಂಜಿ ಕುಡಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಈರುಳ್ಳಿ ಜ್ಯೂಸ್ ಎಂದಾಕ್ಷಣ ಅಚ್ಚರಿ ಪಡಬೇಕಿಲ್ಲ. ಇದೂ ಕೂಡ ದೇಹದ ಉಷ್ಣಾಂಶ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈರುಳ್ಳಿ ಜ್ಯೂಸ್ ಕುಡಿಯಲು ಕಷ್ಟವಾಗಬಹುದು. ಆದರೆ ಅದನ್ನು ಬಾಯಿಗೆ ಹಿತಕರವಾದ ಜ್ಯೂಸ್ ಆಗಿ ತಯಾರಿಸುವ ವಿಧಾನವೂ ಇದೆ.

ಈರುಳ್ಳಿ ಜತೆಗೆ ಸ್ವಲ್ಪ ಉಪ್ಪು, ಮೆಣಸಿನಪುಡಿ ಹಾಕಿ, ಇತರೆ ಜ್ಯೂಸ್‌ಗಳಂತೆ ರುಚಿಕರವಾಗಿ ತಯಾರಿಸಿ ಕುಡಿಯಬಹುದು. ಜ್ಯೂಸ್ ಹಿತಕರವಲ್ಲ ಎನ್ನುವವರು ಆಹಾರ ಸೇವಿಸುವಾಗ ಈರುಳ್ಳಿಯನ್ನು ಸಲಾಡ್ ರೂಪದಲ್ಲಿ ಬಳಸಬಹುದಾಗಿದೆ.

ಹುಣಸೆಹುಳಿ ನೀರು ಕುಡಿಯುವುದರಿಂದಲೂ ದೇಹದ ತಾಪಮಾನವನ್ನು ತಗ್ಗಿಸುತ್ತದೆ. ಸ್ವಲ್ಪ ನೀರನ್ನು ಪಾತ್ರೆಗೆ ತುಂಬಿ ಬಿಸಿ ಮಾಡಿದ ನಂತರ, ಅದಕ್ಕೆ ಹುಣಸೆ ಹುಳಿ (ಅಗತ್ಯವಿರುವಷ್ಟು) ಹಾಕಿ. ಹತ್ತು ನಿಮಿಷ ಕುದಿಸಬೇಕು. ಅದಾದ ಬಳಿಕ ಅದನ್ನು ಸೋಸಿ, ತಣಿಸಿ ಕುಡಿಯಬೇಕು.  ಇದರಿಂದ ಹಲವು ಬಗೆಯ ಖನಿಜಾಂಶಗಳು ದೇಹಕ್ಕೆ ಸೇರುತ್ತವೆ. ವಿಟಮಿನ್‌ಗಳೂ ಅದರೊಟ್ಟಿಗಿರುತ್ತವೆ.

ಪುದಿನಾ ಎಲೆಗಳಿಂದ ಜ್ಯೂಸ್ ತಯಾರಿಸಿ ಕುಡಿದರೂ ದೇಹದ ಉಷ್ಣತೆ ಕಡಿಮೆಯಾಗಲಿದೆ. ಇದರ ಜೊತೆಗೆ ಕೊತ್ತಂಬರಿ ಎಲೆಗಳನ್ನು ಸೇರಿಸಿದರೆ, ಜ್ಯೂಸ್ ಹಿತವಾಗಿರುತ್ತದೆ. ಪುದಿನಾ ಜ್ಯೂಸ್‌ನಲ್ಲಿ ಔಷಧೀಯ ಗುಣಗಳಿದ್ದು, ದಿನಕ್ಕೊಮ್ಮೆಯಾದರೂ ಸೇವಿಸಿದರೆ ಒಳ್ಳೆಯದು. ಹೀಗೆ ಬೇಸಿಗೆಯಲ್ಲಿ ದೇಹ ಆದಷ್ಟು ತಂಪಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಸೂಕ್ತ ರೀತಿಯಲ್ಲಿ ಆರೈಕೆ ಮತ್ತು ನೀರಿನ ಪೂರೈಕೆಯಾಗದಿದ್ದರೆ ಅಪಾಯ ಎದುರಾಗಲಿದೆ.

Leave a Comment