ಬೇಸಿಗೆ ಎದುರಿಸಲು ಸಜ್ಜಾದ ಜಲಮಂಡಲಿ

ಬೆಂಗಳೂರು, ಮಾ. ೧೫- ಮುಂಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ, ಅವಶ್ಯಕವಾದ ನೀರನ್ನು ಪೂರೈಸಲು, ಬಿಬಿಎಂಪಿ ಮತ್ತು ಜಲಮಂಡಳಿ ಸಜ್ಜುಗೊಂಡಿದೆ.
ಇಂದು ಮಧ್ಯಾಹ್ನ ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಪಾಲಿಕೆ ಮತ್ತು ಜಲಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಪಾಲಿಕೆ ವ್ಯಾಪ್ತಿಯಲ್ಲಿನ ಜನರಿಗೆ ನೀರಿನ ಕೊರತೆಯಾಗದಂತೆ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಕೆ.ಆರ್.ಎಸ್ ಮತ್ತು ಕಬಿನಿಯಲ್ಲಿ 25.5 ಟಿಎಂಸಿ ನೀರು ಲಭ್ಯವಿದೆ. ಬೆಂಗಳೂರು ನಗರಕ್ಕೆ ಮುಂದಿನ ಮೂರೂವರೆ ತಿಂಗಳುಗಳ ಕಾಲ 10 ಟಿಎಂಸಿ ನೀರನ್ನು ಪೂರೈಸಬೇಕಿದೆ ಎಂದು ಸಭೆಯ ನಂತರ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿನ 110 ಹಳ್ಳಿಗಳಿಗೆ ನಗರ ಪ್ರದೇಶಕ್ಕೆ 1,400 ಎಂಎಲ್‌‌ಡಿ ನೀರು ಬೇಕಾಗಿದ್ದು, ಕಾವೇರಿ ನೀರಿನ ಜೊತೆಗೆ ಬೋರ್‌ವೆಲ್‌ಗಳಿಂದಲೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಲಮಂಡಳಿ ವ್ಯಾಪ್ತಿಯಲ್ಲಿ 9,891 ಬೋರ್‌ವೆಲ್‌ಗಳು ಇದ್ದು, ಈ ಪೈಕಿ 9,273 ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. 3 ಲಕ್ಷದ 60 ಸಾವಿರ ಖಾಸಗಿ ಬೋರ್‌ವೆಲ್‌ಗಳು ಇವೆ ಎಂದು ತಿಳಿಸಿದರು.
ನೀರು ವ್ಯತ್ಯಯವಾದಲ್ಲಿ 65 ಟ್ಯಾಂಕರ್‌ಗಳ ಮೂಲಕ ಜಲಮಂಡಳಿ ಉಚಿತವಾಗಿ ನೀರು ಪೂರೈಸಲಿದೆ ಎಂದು ಹೇಳಿದರು.
110 ಹಳ್ಳಿಗಳಲ್ಲಿ ಕಾವೇರಿ ನೀರು ಪೂರೈಸಲು ಮುಂದಾಗಿದ್ದು, 29 ಹಳ್ಳಿಗಳಲ್ಲಿ ನೀರು ಪೂರೈಕೆಯ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಇದರಿಂದ 35 ಸಾವಿರ ಕುಟುಂಬಗಳಿಗೆ ನೀರು ಸಿಗಲಿದ್ದು, 6 ಸಾವಿರ ಜನರ ಪೈಕಿ 1 ಸಾವಿರ ಜನರು ನೀರಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಹೆಚ್ಚುವರಿ ನೀರಿನ ಟ್ಯಾಂಕರ್ ಬೇಕಾಗಿದ್ದಲ್ಲಿ ಅಲ್ಪಾವಧಿ ಟೆಂಡರ್ ಕರೆದು ಒಂದು ವಾರದೊಳಗೆ ನೀರಿನ ಟ್ಯಾಂಕರ್ ಅನ್ನು ಖರೀದಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಖಾಸಗಿ ಟ್ಯಾಂಕರ್‌ಗಳಿಗೆ ಮೂಗುದಾರ
ನಗರದಲ್ಲಿ ಖಾಸಗಿ ಬೋರ್‌ವೆಲ್‌ಗಳೂ ಕೂಡ ನೀರು ಪೂರೈಸುತ್ತಿದ್ದು, ಅವುಗಳ ಮೇಲೆ ಕಡಿವಾಣ ಹಾಕಲು ಟ್ರೇಡ್ ಲೈಸೆನ್ಸ್, ಎಲ್ಲಿಂದ ನೀರು ಸಂಗ್ರಹಿಸಲಾಗುತ್ತಿದೆ, ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲಾಗಿದೆಯೇ ಎಂಬ ಬಗ್ಗೆ ನಿಯಮಾವಳಿಗಳನ್ನು ಎರಡು ವಾರದೊಳಗೆ ರೂಪಿಸಲಾಗುವುದು, ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಯು ಖಾಸಗಿ ಟ್ಯಾಂಕರ್‌ಗಳ ಮಾಲೀಕರು ಒಂದು ಟ್ಯಾಂಕರ್‌ಗೆ ಎಷ್ಟು ದರ ನಿಗದಿ ಮಾಡಬೇಕು ಎಂಬುದರ ಬಗ್ಗೆ ನಿರ್ಧರಿಸಲಿದ್ದಾರೆ.
– ಮಂಜುನಾಥ್ ಪ್ರಸಾದ್, ಆಯುಕ್ತರು.

Leave a Comment