ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ-ಬಡಿಗೇರ

ಹುಬ್ಬಳ್ಳಿ,ನ 14- ರೈತರ ಭರವಸೆಗಳನ್ನು ಈಡೇರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಧಾರವಾಡ ಜಿಲ್ಲಾ ಜನಪರ ಹೋರಾಟ ಸಮಿತಿ ಅಧ್ಯಕ್ಷ ನಿಂಗಪ್ಪ ಬಡಿಗೇರ ಇಂದಿಲ್ಲಿ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹಲವಾರು ಬೇಡಿಕೆಗಳ ಕುರಿತಂತೆ ಜನಪರ ಹೋರಾಟ ಸಮಿತಿವತಿಯಿಂದ ಅನೇಕ ಬಾರಿ ಪ್ರತಿಭಟನೆಗಳನ್ನು ನಡೆಸಿ, ಗಮನ ಸೆಳೆದರೂ ಇವರೆಗೂ ರೈತರ ಯಾವುದೇ ಬೇಡಿಕೆಗಳು ಈಡೇರಿಲ್ಲಾ ಎಂದ ಅವರು, ಇವರೆಗೆ ಸಲ್ಲಿಸಲಾಗಿರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದ ಹೇಳಿದರು.
ರೈತರ ಫಸಲ್ ವಿಮಾ ಯೋಜನೆ ಕುರಿತಂತೆ ಕಳೆದ 3 ವರ್ಷಗಳಿಂದ ರೈತರು ಹಣ ಕಟ್ಟಿದ್ದರೂ, ಇಲ್ಲಿಯವರೆಗೂ ವಿಮೆ ಹಣವನ್ನು ಸರಿಯಾಗಿ ಮಂಜೂರು ಮಾಡದೆ ಸರಕಾರ ಕುಂಟು ನೆಪವನ್ನು ನೀಡುತ್ತಿದೆ ಎಂದರು.
ಅಂಗವಿಕಲ, ವಿಧವಾ,ವೃದ್ದಾಪ್ಯ ವೇತನ, ಹಿರಿಯ ನಾಗರಿಕ ಮಾಸಾಶನ ಅವನ್ನು ಕೂಡಾ ಸರಕಾರ ತಡೆಹಿಡಿದಿದ್ದು, ಫಲಾನುಭವಿಗಳು ಬ್ಯಾಂಕಿಗೆ ತಮ್ಮ ಹಣ ಬಂದಿದೆಯೇ ಎಂದು ಕೇಳಲು ಹೋದರೆ ಬಂದಿಲ್ಲ ಎಂದು ಅವರು ಹೇಳುತ್ತಾರೆ. ಆದ್ದರಿಂದ ತಹಸೀಲ್ದಾರ ಕಚೇರಿಗೆ ಫಲಾನುಭವಿಗಳು ಅಲೆದು ಅಲೆದು ಸುಸ್ತಾಗಿದ್ದಾರೆ.
ಗೋರಪ್ಪ, ಗೋರಮ್ಮ, ಕುದುರೆಕಾರ, ಜೋಗಪ್ಪ, ಜೋಗಮ್ಮ ಇವರುಗಳಿಗೆ ಮಾಸಾಶನವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ವಿಶ್ವ ಕರ್ಮ ಸಮಾಜದವರಿಗೆ ರಾಜೀವ ಗಾಂಧಿ ವಸತಿ ಯೋಜನೆಯಡಿ 1300 ಮನೆ ನಿರ್ಮಾಣಕ್ಕೆ ಮಂಜೂರು ದೊರೆತಿದ್ದು, ಕೂಡಲೇ ಸರಕಾರದಿಂದ ಮಂಜೂರಾತಿ ಪಡೆದು ಮನೆ ನಿರ್ಮಾಣಕ್ಕೆ ಮುಂದಾಗಬೇಕೆಂದರು.
ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆಯಾಗಬೇಕು. ಸೋಯಾಬಿನ್, ಶೇಂಗಾ, ಗೋವಿನ ಜೋಳ, ಹತ್ತಿ, ಬೆಂಬಲ ಬೆಲೆ ನೀಡಿ ಸರಕಾರದಿಂದ ಖರೀದಿಸುವ ವ್ಯವಸ್ಥೆಯಾಗಬೇಕು. ದಲ್ಲಾಳಿಗಳಿಂದ ರೈತರಿಗೆ ಆಗುತ್ತಿರುವ ಮೋಸ ತಪ್ಪಿಸಬೇಕೆಂದರು.
ಕಳೆದ ಮೂರ್ನಾಲ್ಕು ವರ್ಷದಿಂದ ಮಳೆ ಬರದೆ ತತ್ತರಿಸಿರುವ ರೈತರ ಸಾಲಮನ್ನಾ ಮಾಡಬೇಕು ಎಂದರು.
ಈ ಎಲ್ಲ ಬೇಡಿಕೆಗಳನ್ನು ಶೀಘ್ರ ಸರಕಾರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಜನಪರ ಹೋರಾಟ ಸಮಿತಿಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
ಪ್ರಗತಿಪರ ರೈತರಾದ ಚಂದ್ರಶೇಖರ ಬಿಸಿರೊಟ್ಟಿ, ಸತೀಶಗೌಡಾ ಪಾಟೀಲ, ಶಂಕರ ಝೆಂಡೆ, ಗೋರಪ್ಪ ಹಡಪದ, ಚಿದಾನಂದ ಕಮ್ಮಾರ ಮತ್ತಿತರರು ಗೋಷ್ಠಿಯಲ್ಲಿದ್ದರು.

Leave a Comment