ಬೇಡಿಕೆ ಈಡೇರಿಕೆ ಆಗ್ರಹಿಸಿ ಕಲಾವಿದರ ಪ್ರತಿಭಟನೆ

ತುಮಕೂರು, ಜು. 8- ಸಂಘ ಸಂಸ್ಥೆಗಳಿಗೆ ನೀಡಬೇಕಾಗಿರುವ ಅನುದಾನವನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಹಾಗೂ ಕಲಾವಿದರಿಗೆ ಸಹಾಯಧನ ನೀಡುವಂತೆ ಆಗ್ರಹಿಸಿ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಕಲಾವಿದರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ಕಲಾವಿದರುಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿ, ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಿರಿಯ ಕಲಾವಿದರಾದ ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣ್‌ದಾಸ್ ಮಾತನಾಡಿ, ಸಾಂಸ್ಕೃತಿಕ ಸಂಘ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಒಕ್ಕೂಟ ಕರ್ನಾಟಕದಾದ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಇದುವರೆಗೂ ಅನುದಾನ ಕೊಡುತ್ತಾ ಪ್ರೋತ್ಸಾಹಿಸಲಾಗುತ್ತಿತ್ತು. ಆದರೆ ಈ ವರ್ಷದಿಂದ ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸಂಘ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದರು.

ಕಳೆದ ಒಂದು ದಶಕದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ಸಂಘ ಸಂಸ್ಥೆಗಳಿಗೆ ನೀಡುತ್ತಾ ಬಂದಿರುವ ಅನುದಾನವನ್ನು ಯಥಾವತ್ತಾಗಿ ಯೋಗ್ಯತಾನುಸಾರ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ನಮ್ಮ 8 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಆನ್‌ಲೈನ್‌ನಲ್ಲಿ ಅನುದಾನ ಕೋರಿ ಸಲ್ಲಿಸುತ್ತಿರುವ ಅರ್ಜಿಗಳನ್ನು ಸಲ್ಲಿಸಿದ ಅವಧಿ ಮುಕ್ತಾಯವಾದ ಆಯಾ ವರ್ಷದ ಮಧ್ಯಭಾಗದಲ್ಲಿ ಅಂದರೆ ಅಕ್ಟೋಬರ್ 31 ರೊಳಗೆ ಅನುದಾನ ಮಂಜೂರಾತಿ ನೀಡಬೇಕು ಎಂದರು.

2 ಲಕ್ಷಕ್ಕಿಂತ ಮೇಲ್ಟಟ್ಟು ಮಂಜೂರಾತಿ ಪಡೆಯುವ ಸಂಸ್ಥೆಗಳ ಅನುದಾನವನ್ನು ಕಂದಾಯಾಧಿಕಾರಿಗಳು ಪರಿಶೀಲಿಸಿ ಬಿಡುಗಡೆ ಮಾಡುವುದು ಸರಿಯಲ್ಲ. ಸಂಬಂಧಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದಲೇ ಇದು ಆಗಬೇಕು. ತಾಲ್ಲೂಕು ಮಟ್ಟದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಕರ್ನಾಟಕ ಸಂಸ್ಕೃತಿ ಉತ್ಸವದ ಕಾರ್ಯಕ್ರಮಗಳ ಯೋಜನೆ ರದ್ದಾಗಬೇಕು. ಮಂಜೂರಾತಿ ಪಡೆದ ಎಲ್ಲಾ ಸಂಘ ಸಂಸ್ಥೆಗಳು ಸರ್ಕಾರದ ಆದೇಶದ ಅನ್ವಯ ನಡೆಸಬೇಕಾಗಿರುವುದರಿಂದ ಈ ರೀತಿಯ ಯೋಜನೆ ಅಗತ್ಯವಿಲ್ಲ ಎಂದು ಪ್ರತಿಭಟನಾನಿರತ ಕಲಾವಿದರು ಹೇಳಿದರು.

ಕೇಂದ್ರ ಕಚೇರಿಯು ಆಯೋಜಿಸುವ ವೈಭವೋಪೇತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಪ್ರಥಮ ಪಾಶಸ್ತ್ಯ ದೊರೆಯಬೇಕು. 75:25ರ ಅನುಪಾತ ಕಡ್ಡಾಯವಾಗಬೇಕು. ಸಂಬಂಧಿಸಿದ ಖಾತೆಯ ಯಾರೇ ಮಂತ್ರಿಯಾಗಲೀ ಕಲಾವಿದರನ್ನು ಅವಾಚ್ಯ ಪದಗಳಿಂದ ನಿಂದಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದರು.

ಕಲಾವಿದರ ಅನುಪಮ ಸೇವೆಯನ್ನು ಗುರುತಿಸಿ ಕಲಾವಿದರಿಗೆ ಇಲಾಖೆ ಗುರುತಿನ ಪತ್ರ ನೀಡಿದೆ. ಆದರೆ ಈ ಗುರುತಿನ ಪತ್ರ ಶಕ್ತಿ ಸೌಧದಲ್ಲಿ ಮಾನ್ಯತೆ ಇಲ್ಲದಾಗಿದೆ. ಇದರಿಂದಾಗಿ ವಿಕಾಸಸೌಧ, ವಿಕಾಸಸೌಧಕ್ಕೆ ಕಲಾವಿದರ ಪ್ರವೇಶಕ್ಕೆ ಅವಕಾಶ ಇಲ್ಲವಾಗಿದೆ. ಕೂಡಲೇ ಈ ನಿರ್ಬಂಧವನ್ನು ತೆರವುಗೊಳಿಸಿ ಕಲಾವಿದರ ಗುರುತಿನ ಚೀಟಿಗೆ ಪ್ರವೇಶ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಲಾವಿದರಾದ ಮಲ್ಲಿಕಾರ್ಜುನ ಕೆಂಕೆರೆ, ಹೆಚ್.ಎಂ. ರಂಗಯ್ಯ, ನರಸಿಂಹದಾಸ್, ಬಾಲಾ ವಿಶ್ವನಾಥ್, ಮಹಾಲಿಂಗಯ್ಯ, ಹೇಮಲತಾ, ಜಲಧಿರಾಜು ಸೇರಿದಂತೆ ನೂರಾರು ಕಲಾವಿದರು ಪಾಲ್ಗೊಂಡಿದ್ದರು.

 

Leave a Comment