ಬೇಡಿಕೆ ಈಡೇರಿಕೆಗಾಗಿ ಪಶುಪಾಲನಾ ಇಲಾಖೆ ನೌಕರರ ಪ್ರತಿಭಟನೆ

ತುಮಕೂರು, ಮೇ ೧೯- ವೃಂದ ಮತ್ತು ನೇಮಕಾತಿ ಅಂತಿಮ ಅಧಿಸೂಚನೆಗಾಗಿ ಆಗ್ರಹಿಸಿ ಕರ್ನಾಟಕ ಪಶು ವೈದ್ಯಕೀಯ ಸಂಘ, ಪರಿವೀಕ್ಷಕರ ಸಂಘ ಹಾಗೂ ಸಹಾಯಕರ ಸಂಘ ಜಂಟಿಯಾಗಿ ಪಶು ಸೇವಾ ಚಿಕಿತ್ಸಾ ಕೆಲಸ ಸ್ಥಗಿತಗೊಳಿಸಿ ನಡೆಸುತ್ತಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕರ್ನಾಟಕ ಸರ್ಕಾರವೂ 2012ರಲ್ಲಿ ಕರ್ನಾಟಕ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಪುನರ್ ರಚನೆಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶದಂತೆ, 2012ರ ಡಿಸೆಂಬರ್ 31 ರಂದು ಗೆಜೆಟೆಡ್ ನೋಟಿಫಿಕೇಷನ್ ಹೊರಡಿಸಲಾಗಿತ್ತು. ಅದರಂತೆ ಇಲಾಖೆಯ

ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಉನ್ನತ ಮಟ್ಟದ ಸಮಿತಿದನ್ನು ನೇಮಕಗೊಂಡಿದ್ದು, ಸಮಿತಿ ನೀಡಿದ ವರದಿಗೆ ಏಪ್ರಿಲ್ 2016 ರಲ್ಲಿ ಸಚಿವ ಸಂಪುಟದ ಒಪ್ಪಿಗೆ ದೊರೆತ್ತಿದ್ದರೂ ಇದುವರೆಗೂ ವೃಂದ ಮತ್ತು ನೇಮಕಾತಿ ಅಂತಿಮ ಅಧಿಸೂಚನೆ

ಹೊರಡಿಸಿರುವುದಿಲ್ಲ. ಇದರಿಂದ ಹಾಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಾಕಷ್ಟು ಅನ್ಯಾಯವಾಗಿದೆ ಎಂಬುದು ಪ್ರತಿಭಟನಾನಿರತ ಪಶುವೈದ್ಯಕೀಯ ಸಿಬ್ಬಂದಿಯ ದೂರಾಗಿದೆ.
ಕಳೆದ ಎರಡು ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಮಿಯಾನ ಹಾಕಿಕೊಂಡು ಅನಿರ್ಧಿಷ್ಠಾವಧಿ ಮುಷ್ಕರ ನಡೆಸುತ್ತಿರುವ ಪಶು ವೈದ್ಯಕೀಯ ಸಿಬ್ಬಂದಿಯನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡ ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು. ಈಗಾಗಲೇ ಇಲಾಖೆಯ ಪುನರ್ ವಿಂಗಡನೆಯ ಕಾರ್ಯ ಮುಗಿದಿದ್ದು, ಹುದ್ದೆಗಳು ಹಂಚಿಕೆಯಾಗಿರುವುದರಿಂದ ಅಂತಿಮ ಅಧಿಸೂಚನೆ ಹೊರಡಿಸುವುದರಿಂದ ಇಲಾಖೆಯ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳದು. ಆದ್ದರಿಂದ ಪಶುಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಜತೆಗೆ ಮಾತುಕತೆ ನಡೆಸಿ, ಪಶು ವೈದ್ಯಕೀಯ ಸಿಬ್ಬಂದಿಯ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.

ಬರಗಾಲದಲ್ಲಿ ರೈತರನ್ನು ಕಾಯುತ್ತಿರುವುದೇ ಪಶು ಸಂಪತ್ತು. ಇದರ ಉಸ್ತುವಾರಿ ಹೊತ್ತಿರುವ ನೀವುಗಳು ನಿಮ್ಮಗಳ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಲಸ ಸ್ಥಗಿತಗೊಳಿಸಿ ಧರಣಿ ನಡೆಸುತ್ತಿರುವುದರಿಂದ ಇದರ ಪರಿಣಾಮ ಗ್ರಾಮೀಣ ಭಾಗದಲ್ಲಿರುವ ಪಶು ಸಂಪತ್ತಿನ ಮೇಲಾಗಲಿದೆ. ಅಲ್ಲದೆ ಜಿಲ್ಲೆಯಲ್ಲಿರುವ ಗೋಶಾಲೆಗಳಲ್ಲಿ ಜಾನುವಾರುಗಳ ನಿರ್ವಹಣೆ ಪಶು

ವೈದ್ಯಕೀಯ ಸಿಬ್ಬಂದಿಗಳದೇ ಆಗಿದೆ. ನಿಮ್ಮ ಹೋರಾಟ ಗೋಶಾಲೆಗಳ ಮೇಲೆ ದುಷ್ಪರಿಣಾಮ ಬೀರ ಬಾರದು. ಆದ್ದರಿಂದ ಸರ್ಕಾರದ ಪಶುಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಇಲಾಖೆಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಈ ಸಂಬಂಧ ಮಾತುಕತೆ ನಡೆಸಲಾಗುವುದು ಎಂದರು.

ಸರ್ಕಾರ ಇಲಾಖೆಯ ವೃಂದ ಮತ್ತು ನೇಮಕಾತಿಯ ಅಂತಿಮ ಅಧಿಸೂಚನೆ ಹೊರಡಿಸುವವರೆಗೆ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ನಿರ್ಧರಿಸಿರುವ ಕರ್ನಾಟಕ ಪಶು ವೈದ್ಯಕೀಯ ಸಂಘ ಪ್ರತಿಭಟನಾ ಧರಣಿಯನ್ನು ಮುಂದುವರೆಸಿದೆ.

ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ.ವಿ.ಸಿ.ರುದ್ರಪ್ರಸಾದ್, ಪ್ರಧಾನ ಕಾರ್ಯದರ್ಶಿ ಡಾ.ದಿವಾಕರ್,  ಜಂಟಿ ಕಾರ್ಯದರ್ಶಿ ಡಾ.ಬಿ.ಆರ್.ನಂಜೇಗೌಡ, ಖಜಾಂಚಿ ಡಾ.ಆರ್.ಎಂ.ನಾಗಭೂಷಣ್, ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರಿವೀಕ್ಷಕರ ಸಂಘದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ನಾಗರಾಜು, ಪಶುವೈದ್ಯಕೀಯ ಸಹಾಯಕರ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ಸಿಬ್ಬಂದಿ ಪಾಲ್ಗೊಂಡಿದ್ದರು.

 

Leave a Comment