ಬೇಡಿಕೆ ಈಡೇರಿಕೆಗಾಗಿ ತುಂಗಭದ್ರಾ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು, ಜು. ೩- ತುಂಗಭದ್ರಾ ನೀರಾವರಿ ಕಾರ್ಮಿಕರ ೧೪ ತಿಂಗಳುಗಳ ವೇತನ ಪಾವತಿ, ಹೊರಗುತ್ತಿಗೆ ರದ್ದತಿ ಹಾಗೂ ವರ್ಷಪೂರ್ತಿ ಕೆಲಸದೊಂದಿಗೆ ೧೫ ವರ್ಷಗಳ ಭವಿಷ್ಯ ನಿಧಿ ಪಾವತಿಸುವಂತೆ ಒತ್ತಾಯಿಸಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಸದಸ್ಯರು ಇಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ತುಂಗಭದ್ರಾ ನೀರಾವರಿ ವಲಯದ ಎಡದಂಡೆ ಕಾಲುವೆಯ ಯರಮರಸ್ ವೃತ್ತ ಹಾಗೂ ಯರಮರಸ್ ವಿಭಾಗಗಳಲ್ಲಿ ಕಳೆದ ೨೫ ವರ್ಷಗಳಿಂದ ಸುಮಾರು ೭೪೮ ಮಂದಿ ಕಾರ್ಮಿಕರು ದುಡಿಯುತ್ತಿದ್ದು ೨೦೧೮ರಲ್ಲಿ
ಹೊರಗುತ್ತಿಗೆ ಕಾರ್ಮಿಕರನ್ನು ತೆಗದುಕೊಳ್ಳಲು ಸರ್ಕಾರ ಕ್ರಮಕೈಗೊಂಡಿತ್ತು. ಹೊರಗುತ್ತಿಗೆ ಜಾರಿಯಾದರೆ ತುಂಗಭದ್ರಾ ಕಾರ್ಮಿಕರ ೨೫ ವರ್ಷಗಳ ಸೇವೆ ಮಣ್ಣು ಪಾಲಾಗಲಿದೆ ಎಂದು ಖಂಡಿಸಿ ಸುಮಾರು ೭೦ ದಿನಗಳ ಕಾಲ ಮುಷ್ಕರ ನಡೆಸಿದವು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ
ಕಳೆದ ೨೦೧೮ರ ಸೆಪ್ಟೆಂಬರ್ ೧೭ ರಂದು ಪ್ರತಿಭಟನಾ ಸ್ಥಳಕ್ಕೆ ಬಂದ ರಾಯಚೂರು ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯ ನೀರಾವರಿ ನಿಗಮದ ಅಧಿಕಾರಿಗಳು ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ನಮ್ಮ ಬೇಡಿಕೆ ಈಡೇರಲಿಲ್ಲ ಎಂದು ಹೇಳಿದರು.
ಕಳೆದ ವರ್ಷ ಏಪ್ರಿಲ್‌ನಿಂದ ಇಲ್ಲಿಯವರೆಗೂ ಸಂಬಳ ನೀಡಿಲ್ಲ, ಹೊರಗುತ್ತಿಗೆ ರದ್ದಾಗಿಲ್ಲ, ೧೫ ವರ್ಷದ ಭವಿಷ್ಯ ನಿಧಿಗೆ ಹಣ ಜಮೆ ಮಾಡಿಲ್ಲ ಎಂದು ತಿಳಿಸಿದ ಪ್ರತಿಭಟನಾಕಾರರು, ಕಳೆದ ೧೩ ತಿಂಗಳುಗಳಲ್ಲಿ ಕಾರ್ಮಿಕರ ಖಾತೆಗೆ ಕೇವಲ ೪೦ ಸಾವಿರ ರೂ ಮಾತ್ರ ಹಾಕಲಾಗಿದ್ದು. ಇದು ಯಾವ ಹಣ ಎಂಬ ಮಾಹಿತಿಯೂ ನಮಗೆ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ರವರು ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

Leave a Comment