ಬೇಡಿಕೆ ಈಡೇರಿಕೆಗಾಗಿ ಆಂಧ್ರ ಸಿಎಂ ಉಪವಾಸ ಸತ್ಯಾಗ್ರಹ

ನವದೆಹಲಿ, ಫೆ. ೧೧- ಆಂಧ್ರಪ್ರದೇಶವನ್ನು 2014 ರಲ್ಲಿ ವಿಭಜಿಸುವ ಮುನ್ನ ನೀಡಿದ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದಿಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರುಖ್ ಅಬ್ದುಲ್ಲಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ, ಹಲವಾರು ವಿರೋಧ ಪಕ್ಷಗಳ ನಾಯಕರು, ನಾಯ್ಡು ಉಪವಾಸ ಕೈಗೊಂಡಿರುವ ಆಂಧ್ರಪ್ರದೇಶ ಭವನಕ್ಕೆ ಆಗಮಿಸಿ ಬೆಂಬಲ ಕೋರಿದರು.

ಉಪವಾಸ ಆರಂಭಿಸುವ ಮುನ್ನ ನಾಯ್ಡು ರಾಜಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷದ ನಿಯೋಗವೊಂದು ನಾಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಅರ್ಪಿಸಲಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ನಾಯ್ಡು ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಯತ್ನದಲ್ಲಿ ತೊಡಗಿದ್ದು, ಕಳೆದ ಮೂರು ತಿಂಗಳಲ್ಲಿ ಬಿಜೆಪಿ ವಿರೋಧಿ ವೇದಿಕೆ ಸ್ಥಾಪನೆಗೆ ಪ್ರತಿಪಕ್ಷಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಎನ್‌ಡಿಎ ಸರ್ಕಾರದಿಂದ ಕಳೆದ ವರ್ಷದ ಮಾರ್ಚ್‌ನಲ್ಲಿ ಟಿಡಿಪಿ ಹೊರಬಂದಿತ್ತು. ಆಂಧ್ರಪ್ರದೇಶದ ಅತ್ಯಾಧುನಿಕ ರಾಜಧಾನಿ ಅಮರಾವತಿ ನಿರ್ಮಾಣ, ಪೊಲಾವರಂ ನೀರಾವರಿ ಯೋಜನೆಗೆ ಹಾಗೂ ಕಡಪ ಉಕ್ಕು ಘಟಕಕ್ಕೆ ಸಾಕಷ್ಟು ಹಣ ನೀಡದಿರುವ ಬಗ್ಗೆ ಟಿಡಿಪಿ ಮೋದಿ ಸರ್ಕಾರವನ್ನು ದೂಷಿಸುತ್ತಿದೆ.
2014ರ ಜೂನ್ 2 ರಂದು ಆಂಧ್ರಪ್ರದೇಶವನ್ನು ವಿಭಜಿಸಿದ್ದು, ಹೈದರಾಬಾದ್ ಹೊಸರಾಜ್ಯ ತೆಲಂಗಾಣದ ರಾಜಧಾನಿಯಾಯಿತು. ಆಂಧ್ರದ ಜನತೆಯ ವಿರುದ್ಧ ಪ್ರಧಾನ ಮಂತ್ರಿ ವೈಯಕ್ತಿಕ ಆಕ್ರಮಣ ನಡೆಸಿದ್ದೇ ಆದರೆ ಅವರಿಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದ ನಾಯ್ಡು, ಮೋದಿ ರಾಜಧರ್ಮವನ್ನು ಪಾಲಿಸುತ್ತಿಲ್ಲ ಎಂದರು.
ಹಿಂದೆ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್‌ನಲ್ಲಿ ರಾಜಧರ್ಮ ಪಾಲನೆಯಾಗಲಿಲ್ಲ ಎಂದರು. ಈಗ ಆಂಧ್ರಪ್ರದೇಶದ ವಿಷಯದಲ್ಲೂ ಪಾಲನೆಯಾಗುತ್ತಿಲ್ಲ. ನಮಗೆ ನ್ಯಾಯವಾಗಿ ಧಕ್ಕಬೇಕಿರುವುದನ್ನೇ ಕೊಡುತ್ತಿಲ್ಲ ಎಂದೂ ನಾಯ್ಡು ಜರಿದರು.
ಆಂಧ್ರಕ್ಕೆ ಕೇಂದ್ರ ಸರ್ಕಾರ ಭಾರೀ ಅನ್ಯಾಯ ಮಾಡಿದೆ. ಇದು ದೇಶದ ಏಕತೆಯ ಮೇಲೆ ಪರಿಣಾಮ ಬೀರಲಿದೆ. ಆಂಧ್ರಪ್ರದೇಶ ಪುನರ್ ಸಂಘಟನಾ ಕಾಯ್ದೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ನಿಮಗೆ ನೆನಪು ಮಾಡುವ ಸಲುವಾಗಿ 5 ಕೋಟಿ ಜನರ ಪರವಾಗಿ ಬಂದು ಎಚ್ಚರಿಸುತ್ತಿದ್ದೇನೆ ಎಂದು ನಾಯ್ಡು ಗುಡುಗಿದ್ದಾರೆ.

Leave a Comment