ಬೇಡಿಕೆಗಾಗಿ ಒತ್ತಾಯಿಸಿ ದೇವದಾಸಿ ಮಹಿಳೆಯರಿಂದ ಪ್ರತಿಭಟನೆ

ದಾವಣಗೆರೆ, ಜೂ. 13 – ದೇವದಾಸಿ ಮಹಿಳೆಯರ ಹಾಗೂ ಅವರ ಕುಟುಂಬದ ಸದಸ್ಯರ ಗಣತಿಯನ್ನು ನಡೆಸಿ ಅವರಿಗೆ ಪುನರ್ವಸತಿಗೆ ಕ್ರಮವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸುಮಾರು ಒಂದು ವರ್ಷಗಳ ಹಿಂದೇಯೇ ದೇಶದಲ್ಲಿ ದೇವದಾಸಿ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ ದೇಶದ ಹಲವು ರಾಜ್ಯಗಳಾದ ಮುಖ್ಯವಾಗಿ ಕರ್ನಾಟಕ, ಆಂದ್ರಪ್ರದೇಶ, ತೆಲಂಗಣಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈಗಲೂ ಅಲ್ಲಲ್ಲಿ ಮುಂದುವರೆದಿದೆ. ಕರ್ನಾಟಕದಲ್ಲೋಂದೇ, ಸರ್ಕಾರದ ಗಣತಿ ಪ್ರಕಾರ 60. 000 ರಷ್ಟು ಮತ್ತು ಗಣತಿಯಲ್ಲಿರದ ಸಾವಿರಾರು ಕುಟುಂಬಗಳು ಸೇರಿ ಸುಮಾರು ಒಂದು ಲಕ್ಷ ಕುಟುಂಬಗಳಿರುತ್ತವೆ ಎಂದು ಅಂದಾಜಿಸಲಾಗಿದೆ.
ಅಮಾನವೀಯ ಹಾಗೂ ಜನತೆಯನ್ನು ಒಡೆದಾಳುವ ದೌರ್ಜನ್ಯದ ಜಾತಿ ಪದ್ದತಿಯ ಭಾಗವಾಗಿ, ಈ ಜನಸಮುದಾಯಗಳು ಕಡು ಬಡತನದಲ್ಲಿಯೇ ಮತ್ತು ಮೇಲ್ಜಾತಿಗಳ ಮೇಲ್ವರ್ಗಗಳ ಅವಲಂಬನೆಯಲ್ಲಿಯೇ ಪರಂಪರೆಯಿಂದ ಬದುಕುತ್ತಿರುದು ದುರಂತದ ಸಂಗತಿ. ಮೇಲ್ಜಾತಿ ದೌರ್ಜನ್ಯದಿಂದ ದೇವದಾಸಿ ಪದ್ದತಿಯ ಫಲಾನುಭವಿಗಳಾಗಿದ್ದು ಇಂತಹ ಅಪರಾಧಿ ಫಲಾನುಭವಿಗಳ ಮೇಲೆ ಅಗತ್ಯ ಕ್ರಮವಹಿಸಲು ಕಾನೂನಿನಲ್ಲಿ ಅವಕಾಶಗಳು ಇರುವುದಿಲ್ಲ ಮತ್ತು ದೇವದಾಸಿ ಪದ್ದತಿ ನಿಷೇಧದ ನಂತರ ಈ ಜನ ಸಮುದಾಯಗಳನ್ನು ಹಾಗೂ ಈ ದೌರ್ಜನ್ಯದ ಪದ್ಧತಿಗೆ ಬಲಿಯಾದ ಮಹಿಳೆಯರ ಮತ್ತು ಅವರ ಕುಟುಂಬದ ಸದಸ್ಯರನ್ನು ಸ್ವಾವಲಂಬಿಗಳಾಗುವಂತೆ ಪರಿಣಾಮಕಾರಿಯಾಗಿ ಪುನರ್ವಸತಿಗೊಳಪಡಿಸಬೇಕೆಂದು ಒತ್ತಾಯಿಸಿದರು. ದೇಶದಾದ್ಯಂತ ದೇವದಾಸಿ ಮಹಿಳೆಯರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಗಣತಿ ಮಾಡಲು ಸರ್ಕಾರ ಮುಂದಾಗಬೇಕು ಹಾಗೂ ಪುನರ್ ವಸತಿಗೆ ಕ್ರಮ ಕೈಗೊಳ್ಳಬೇಕು.
ದೇವದಾಸಿ ಪದ್ದತಿ ನಿಷೇಧ ಕಾಯ್ದೆ ಮಹಿಳೆಯರ ಮಕ್ಕಳು ಅವರ ತಂದೆಯ ಕುಟುಂಬದಿಂದ ಆಸ್ತಿಯಲ್ಲಿ ಪಾಲು ಪಡೆಯಲು ಮತ್ತು ನಿರ್ವಹಣೆಯ ಪರಿಹಾರ ಪಡೆಯಲು ಅಗತ್ಯ ಕ್ರಮಗಳಿರಬೇಕು ಎಲ್ಲಾ ದೇವದಾಸಿ ಮಹಿಳೆಯರಿಗೆ ಮಾಸಿಕ 5000 ರೂಗಳ ಸಹಾಯ ಧನವನ್ನು ಕೇಂದ್ರ ಸರ್ಕಾರ ಒದಗಿಸಬೇಕು ವ್ಯವಸಾಯದಲ್ಲಿ ತೊಡಗಲು ಇಚ್ಚಿಸುವ ಎಲ್ಲಾ ದೇವದಾಸಿ ಮಹಿಳೆಯರ ಮತ್ತು ಅವರ ಕುಟುಂಬಗಳ ಸದಸ್ಯರಿಗೆ ಹಾಗೂ ಅವರ ಜನ ಸಮುದಾಯಗಳ ಕುಟುಂಬಗಳಿಗೆ ತಲಾ 05 ಎಕರೆ ಜಮೀನು ಮತ್ತು ವಾಸಕ್ಕೆ ನಿವೇಶನದಲ್ಲಿ ಮನೆಯನ್ನು ಕಟ್ಟಿಕೊಡಬೇಕೆಂದು ಹಾಗೂ ಸ್ವ ಉದ್ಯೋಗದಲ್ಲಿ ತೊಡಗಲು ತರಬೇತಿ ಸಹಿತ ಸಹಾಯ ಧನದ ಸಾಲಗಳನ್ನು ನೀಡಬೇಕು. ಪರಿಶಿಷ್ಟಜಾತಿ, ಪಂಗಡಗಳ ಜನರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ಒದಗಿಸುವ ಶಾಸನವನ್ನ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಕೆ.ಎಲ್.ಭಟ್, ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಮ್ಮ, ಹಿರಿಯಮ್ಮ, ಮಲ್ಲಮ್ಮ, ಚನ್ನಮ್ಮ, ಮುತ್ತಮ್ಮ, ಹೊನ್ನಮ್ಮ, ಹುಚ್ಚಮ್ಮ, ಸಿದ್ದಮ್ಮ, ಮಂಜುಳಾ ಜೆ, ಭಾಗ್ಯ ಹೆಚ್, ಹನುಮಕ್ಕ, ರೇಣುಕಮ್ಮ ಮತ್ತಿತರರಿದ್ದರು,

Leave a Comment