ಬೇಜಬ್ದಾರಿಯಿಂದ ವರ್ತಿಸಿದವರ ವಿರುದ್ಧ ಶಿಸ್ತುಕ್ರಮ- ಡಿಸಿ

ಮೈಸೂರು. ಮಾ.14- ಮುಂಬರುವ ವಿಧಾನಸಭಾ ಚುನಾವಣೆ- 2018ರ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ವಿದ್ಯುನ್ಮಾನ ಯಂತ್ರಗಳನ್ನು ಮೈಸೂರಿಗೆ ತರಿಸಲಾಗಿದ್ದು, ಭದ್ರವಾಗಿ ಇರಿಸಲಾಗಿತ್ತು.
ಅದನ್ನು ನೋಡಿಕೊಳ್ಳಲು ನಗರ ಸಶಸ್ತ್ರ ಪೊಲೀಸ್ ರನ್ನು ನೇಮಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಡಿ.ರಂದೀಪ್ ವರ್ಗಾವಣೆಗೊಳ್ಳುತ್ತಲೇ ನೂತನ ಜಿಲ್ಲಾಧಿಕಾರಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಬೇಜವ್ದಾರಿ ತೋರುತ್ತಿರುವುದು ನೂತನ ಜಿಲ್ಲಾಧಿಕಾರಿಯವರ ದಿಢೀರ್ ಭೇಟಿಯ ವೇಳೆ ತಿಳಿದು ಬಂದಿದೆ.
3000 ಕಂಟ್ರೋಲ್ ಯೂನಿಟ್, 3600 ಬ್ಯಾಲೆಟ್ ಯೂನಿಟ್, 3500 ವಿವಿ ಪ್ಯಾಟ್ ಯಂತ್ರಗಳು ತಮಿಳುನಾಡಿನಿಂದ ಈಗಾಗಲೇ ಆಗಮಿಸಿದ್ದು, ಮೈಸೂರಿನ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಸಂಗ್ರಹಣಾ ಕೊಠಡಿಯಲ್ಲಿ ಸಂಗ್ರಹಣೆ ಮಾಡಲಾಗಿದೆ. ಮೈಸೂರಿನ ವಿದ್ಯಾವರ್ಧಕ ಕಾಲೇಜು ಮುಂಭಾಗದ ಪಾಲಿಕೆ ಗೋಡೌನ್ ನಲ್ಲಿ ಮತಯಂತ್ರವನ್ನು ಭದ್ರವಾಗಿರಿಸಲಾಗಿದೆ. ಮತ ಯಂತ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ ನೂತನ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಅವರಲ್ಲಿ ಶಿಸ್ತು ಕ್ರಮ ಮೈಗೊಂಡು ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಮತಯಂತ್ರಗಳಿರುವ ಕಡೆ ಸೂಕ್ಷ್ಮವಾಗಿ ಪರಿಶೀಲಿಸಬೇಕಿದ್ದು, ಅವುಗಳಿಗೆ ಹೆಚ್ಚಿನ ಭದ್ರತೆ ಬೇಕು. ಚುನಾವಣೆ ಮುಗಿಯುವವರೆಗೂ ಅವು ನಮ್ಮ ಜವಾಬ್ದಾರಿ. ಆದರೆ ನಾನು ಇಲ್ಲಿ ಭೇಟಿ ನೀಡಿದಾಗ ಯಾರೂ ಕಂಡು ಬಂದಿಲ್ಲ. ಇಲ್ಲಿ ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ಯಾರು? ಯಾಕಾಗಿ ಹೋಗಿದ್ದರು? ಎಲ್ಲಿ ಹೋಗಿದ್ದರು ಈ ಎಲ್ಲ ವಿಷಯಗಳನ್ನು ಕೂಲಂಕುಷವಾಗಿ ತಿಳಿಸಿ, ಬೇಜವ್ದಾರಿಯಿಂದ ವರ್ತಿಸಿದವರ ಮೇಲೆ ಶಿಸ್ತುಕ್ರಮ ಕೈಗೊಳ್ಳಿ. ನನಗೆ ವರದಿ ಸಲ್ಲಿಸಿ ಎಂದಿದ್ದಾರೆ ಎಂದು ತಿಳಿದು ಬಂದಿದೆ.

Leave a Comment