ಬೇಗ್‌ಗೆ ಬಿಜೆಪಿ ಬಾಗಿಲು ಬಂದ್

ಬೆಂಗಳೂರು, ನ. ೧೪- ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ 17 ಶಾಸಕರ ಪೈಕಿ, 16 ಮಂದಿ ಶಾಸಕರು ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರೋಶನ್ ಬೇಗ್ ಅವರಿಗೆ ಬಿಜೆಪಿ ಬಾಗಿಲು ತೆರೆದಿಲ್ಲ.

ಎಲ್ಲಾ ಅನರ್ಹ ಶಾಸಕರ ಜೊತೆ ರೋಶನ್ ಬೇಗ್ ಸಹ ಬಿಜೆಪಿ ಸೇರಲು ಮುಂದಾಗಿದ್ದರು. ಆದರೆ ರೋಶನ್ ಬೇಗ್ ಅವರ ಬಿಜೆಪಿ ಸೇರ್ಪಡೆಗೆ ಬಿಜೆಪಿಯ ಮುಖಂಡರುಗಳು ಅಪಸ್ವರ ತೆಗೆದು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ರೋಶನ್ ಬೇಗ್ ಅವರ ಮೇಲೆ ಐಎಂಎ ಪ್ರಕರಣ ಇರುವುದರಿಂದ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಕೆಲನಾಯಕರು ಒಪ್ಪಿಲ್ಲ. ಹಾಗಾಗಿ ಅನರ್ಹ ಶಾಸಕರ ಜೊತೆ ಇಂದು ರೋಶನ್ ಬೇಗ್ ಬಿಜೆಪಿ ಸೇರಲು ಸಾಧ್ಯವಾಗಲಿಲ್ಲ.

ಅನರ್ಹ ಶಾಸಕ ರೋಶನ್ ಬೇಗ್ ಅವರ ಬಿಜೆಪಿ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ, ಯಾವುದೇ ನಾಯಕರು ಸ್ಪಷ್ಟ ಉತ್ತರ ನೀಡುತ್ತಿಲ್ಲ. ರೋಶನ್ ಬೇಗ್ ಅವರ ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಎಲ್ಲರೂ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿಯಲ್ಲಿ ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ, ರೋಶನ್ ಬೇಗ್ ಬಿಜೆಪಿ ಸೇರ್ಪಡೆ ಸಾಧ್ಯತೆ ಕಡಿಮೆ. ಹಾಗಾಗಿ ಈ ಕ್ಷೇತ್ರದಿಂದ ಬಿಜೆಪಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಇಲ್ಲವೇ, ಮಾಜಿ ಪಾಲಿಕೆ ಸದಸ್ಯ ಸರವಣ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳು ಇವೆ.

ಸವದಿ ಗೈರು
ಅನರ್ಹ ಶಾಸಕ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗೈರು ಹಾಜರಾಗುವ ಮೂಲಕ ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಕ್ಷೇತ್ರದ ಟಿಕೆಟ್ ನೀಡಿಕೆಗೆ ಅವರ ಅಸಮಾಧಾನ, ಅತೃಪ್ತಿ ಜಗಜ್ಜಾಹೀರಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಕಾಂಗ್ರೆಸ್‌ನ ಮಹೇಶ್ ಕುಮಟಳ್ಳಿ ಅವರ ವಿರುದ್ಧ ಕೆಲವೇ ಮತಗಳ ಅಂತರದಿಂದ ಸೋತಿದ್ದರು. ಅವರು ಸೋತ ನಂತರವೂ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮಹೇಶ್ ಕುಮಟಳ್ಳಿ ಉಪಚುನಾವಣೆಯಲ್ಲಿ ಅಥಣಿಯಿಂದಲೇ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸುತ್ತಿರುವುದರಿಂದ ಲಕ್ಷ್ಮಣ ಸವದಿ ಅವರಿಗೆ ತಮ್ಮ ಸ್ವಕ್ಷೇತ್ರ ಅಥಣಿ ಕೈತಪ್ಪಲಿದೆ. ಇದು ಲಕ್ಷ್ಮಣ ಸವದಿ ಅವರ ಮುನಿಸಿಗೆ ಕಾರಣವಾಗಿದೆ.

ಅಥಣಿ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಅನ್ನು ನನಗೆ ನೀಡಿ, ಮಹೇಶ್ ಕುಮಟಳ್ಳಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಎಂದು ಸವದಿ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದರಾದರೂ, ಅದಕ್ಕೆ ಕಿಮ್ಮತ್ತು ಸಿಕ್ಕಿಲ್ಲ. ಇದು ಸವದಿ ಅವರ ಸಿಟ್ಟಿಗೆ ಕಾರಣವಾಗಿದೆ. ಹಾಗಾಗಿಯೇ ಅವರು ಇಂದು ನಡೆದ ಅನರ್ಹರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು ಎಂದು ಹೇಳಲಾಗಿದೆ.

ಸದ್ಯಕ್ಕೆ ವಿಧಾನ ಪರಿಷತ್‌ನ ಸ್ಥಾನಗಳು ಯಾವುದೂ ಖಾಲಿಯಿಲ್ಲ. ಹಾಗಾಗಿ ಸವದಿ ಅವರು, ಇನ್ನು ಮೂರು ತಿಂಗಳಲ್ಲಿ ಶಾಸಕರಾಗದಿದ್ದರೆ, ಅವರ ಉಪಮುಖ್ಯಮಂತ್ರಿ ಸ್ಥಾನಕ್ಕೂ ಕುತ್ತುಬರಲಿದೆ. ಸವದಿಯವರಿಗಾಗಿ ವಿಧಾನ ಪರಿಷತ್‌ನ ಬಿಜೆಪಿಯ ಸದಸ್ಯರಿಂದ ರಾಜೀನಾಮೆ ಕೊಡಿಸಿ, ಆ ಸ್ಥಾನಕ್ಕೆ ಸವದಿ ಅವರನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ, ಸವದಿ ಅವರ ಸ್ಥಿತಿ ತ್ರಿಶಂಕು ಆಗಲಿದೆ.

Leave a Comment