ಬೆವರ ಬೇಸಾಯದ ಹಬ್ಬ ಆಚರಣೆ

ತುಮಕೂರು, ಫೆ. ೧೩- ಸಹಜ ಬೇಸಾಯ ಶಾಲೆ ತುಮಕೂರು ವತಿಯಿಂದ ಬೆವರ ಬೇಸಾಯದ ಹಬ್ಬವನ್ನು ನೆಲಹಾಳ್ ಸಮೀಪದ ಭೂಶಕ್ತಿ ಕೇಂದ್ರದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಹಜ ಬೇಸಾಯ ಮಾಡಲು ನೋಂದಣಿ ಮಾಡಿಸಿಕೊಂಡಿರುವ ಸುಮಾರು 35 ರೈತರು, ಬೆಂಗಳೂರಿನ 15 ಗ್ರಾಹಕರು ಹಾಗೂ ಭೂಶಕ್ತಿ ಕೇಂದ್ರದ ಕಾರ್ಯಕರ್ತರು ಪಾಲ್ಗೊಂಡು ವಿವಿಧ ಜಾತಿಯ ಮರ-ಗಿಡಗಳನ್ನು ಸುಮಾರು 3 ಎಕರೆ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಯಿತು.

ಹಬ್ಬವನ್ನು ವಿಶಿಷ್ಟ ಹಾಗೂ ವಿನೂತನವಾದ ರೀತಿಯಲ್ಲಿ ಭೂ ತಾಯಿಗೆ ಬೇವಿನ ಪತ್ರೆ ಹಾಗೂ ರಾಗಿ ರೊಟ್ಟಿಯೊಂದಿಗೆ ಪೂಜಿಸಿ ಆರಂಭಿಸಲಾಯಿತು.

ಕೃಷಿ ವಿಜ್ಞಾನಿ ಡಾ. ಮಂಜುನಾಥ್ ಅವರ ಮಾರ್ಗದರ್ಶನದಂತೆ ನಿಂಬೆ, ಯಳ್ಳಿ, ಸೀಬೆ, ಬೆಟ್ಟದ ನಲ್ಲಿ, ತೇಗ, ಬಾಳೆ, ಸೀತಾಫಲ, ರಾಮಫಲ, ಮಾವು ಮುಂತಾದ ಗಿಡಗಳನ್ನು ಬಹುಮಹಡಿಯ ವಿನ್ಯಾಸದಲ್ಲಿ ಕೂರಿಸಲಾಯಿತು. ಪಾಲ್ಗೊಂಡಿದ್ದ ಎಲ್ಲರೂ ಸಂಭ್ರಮದಿಂದ ಶ್ರಮ ವಿಭಜನೆ ಮಾಡಿಕೊಂಡು, ಹಲವು ನೆಲದ ಹಾಡುಗಳನ್ನು ಹಾಡುವ ಮೂಲಕ ಹಬ್ಬವನ್ನು ಆಚರಿಸಿದರು.

ಸಹಜ ಬೇಸಾಯ ಶಾಲೆ, ತುಮಕೂರು ವತಿಯಿಂದ ಬಿಡುಗಡೆಗೆ ಸಿದ್ಧಗೊಂಡಿದ್ದ ‘ಮಣ್ಣಿನ ಒಡಲು ಜೀವವೈವಿಧ್ಯತೆಯ ಕಡಲು’ ಎನ್ನುವ ಸಹಜ ಬೇಸಾಯ ವಿವಿಧ ವಿಷಯಾಧಾರಿತ ಪುಸ್ತಕವನ್ನು ಭೂಶಕ್ತಿ ಕೇಂದ್ರದ ವತಿಯಿಂದ ಬಿಡುಗಡೆಗೊಳಿಸಲಾಯಿತು.

ಪುಸ್ತಕದ ವಿಶೇಷತೆ ಕುರಿತು ಮಾತನಾಡಿದ ಜ್ಯೋತಿರಾಜ್, ಹೊದಿಕೆ ಎನ್ನುವ ವಿಷಯ ಬಹಳ ಯೋಚಿಸುವಂತಹದ್ದು. ಕಾರಣ ನಾವುಗಳು ಹೇಗೆ ಚಳಿ, ಬಿಸಿಲು, ಮಳೆಗಳಿಂದ ರಕ್ಷಿಸಿಕೊಳ್ಳುಲು ವಸ್ತ್ರಗಳನ್ನು ಹೊದ್ದುಕೊಳ್ಳುತ್ತೇವೆಯೋ ಹಾಗೆಯೇ ಭೂಮಿಗೂ ಸಹ ಹೊದಿಕೆ ಅಗತ್ಯವಿದೆ. 2020ರ ವೇಳೆಗೆ ಸಹಜ ಬೇಸಾಯದಿಂದ ಬೆಳೆದ ಆಹಾರೋತ್ಪನ್ನವನ್ನು ತುಮಕೂರಿನ ಜನತೆಗೆ ಹಂಚುತ್ತೇವೆ ಎಂದರು.

ರಾಮಕೃಷ್ಣಪ್ಪ ಮಾತನಾಡಿ, ಮಂಜುನಾಥ್ ರವರ ಜ್ಞಾನ, ಡಾ. ನಾಗೇಂದ್ರರವರ ಸ್ಫೂರ್ತಿ, ಯತಿರಾಜುರವರ ಕೆಂದ್ರದ ಪರಿಕಲ್ಪನೆ ಹಾಗೂ ಭೂಶಕ್ತಿ ಕೇಂದ್ರದ ನೆಲೆಯಾಗಿ ಹೊರ ಹೊಮ್ಮುತ್ತಿದೆ. ರೆಡ್ಸ್ ನಮಗೆ 1990ರ ದಶಕದಲ್ಲಿ ಅಕ್ಷರ ಆಂದೋಲನದ ನೆಲೆಯಾಗಿತ್ತು. ಇಂದು ಮಣ್ಣಿನ ಆಂದೋಲನಕ್ಕೆ ನೆಲೆಯಾಗಿದೆ.  ನಾವು ಇದರಲ್ಲಿ ಗೆಲ್ಲುತ್ತೇವೆಂಬ ಭರವಸೆಯಿದೆ ಎಂದರು.

ಸಂವಾದದಲ್ಲಿ ಪಾಲ್ಗೊಂಡ ರೈತರು ಏಕಬೆಳೆ ಪದ್ಧತಿ, ರಾಸಾಯನಿಕಗಳು, ಹೊದಿಕೆ, ಕಷಾಯ ಮುಂತಾದವುಗಳ ಕುರಿತು ಚರ್ಚಿಸಿದರು.

ಕಾರ್ಯಕ್ರಮದಲ್ಲಿ ಎನ್. ಇಂದಿರಮ್ಮ, ಡಾ.ನಾಗೇಂದ್ರ, ನಾದೂರು ಕೆಂಚಪ್ಪ, ಕೆ.ಟಿ. ತಿಪ್ಪೇಸ್ವಾಮಿ, ಪ್ರೀತಮ್, ಮಧುಸೂದನ.ಕೆ.ಪಿ, ಸಾಯಿಲ್ ಶಶಿ, ನಿಸರ್ಗ, ಭೂಶಕ್ತಿ ಕೇಂದ್ರದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Comment