ಬೆಳ್ಳುಳ್ಳಿ ಬೆರೆಸಿದ ಹಾಲು ಆರೋಗ್ಯ ವೃದ್ಧಿಗೆ ನಾಂದಿ

ಮನೆಮದ್ದಿನ ಬಗ್ಗೆ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಜಾಗೃತಿ ಮೂಡುತ್ತಿದೆ. ಮನೆಮದ್ದುಗಳ ಕುರಿತು ಆಸಕ್ತಿ ತೋರದವರೂ ಆಸ್ಪತ್ರೆಗಳಲ್ಲಿ ತಗಲುವ ದುಬಾರಿ ವೆಚ್ಚಗಳಿಗೆ ಹೆದರಿ, ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಮದ್ದುಗಳಿಂದ ಸರಿದೂಗಿಸಿಕೊಳ್ಳಬಹುದೆಂಬ ಸ್ಥಿತಿಗೆ ತಲುಪಿದ್ದಾರೆ.
ನೆಗಡಿ, ಕೆಮ್ಮು, ಅಜೀರ್ಣದಂತಹ ಸಮಸ್ಯೆಗಳು ಕಂಡುಬಂದರೂ ವೈದ್ಯರುಗಳ ಬಳಿ ಓಡುತ್ತಿದ್ದ ಜನರು, ಮನಸ್ಥಿತಿ ಬದಲಿಸಿಕೊಂಡು ಮನೆಮದ್ದುಗಳ ಬಗ್ಗೆ ಒಲವು ತೋರುತ್ತಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು.
ನಿಧಾನವಾಗಿ, ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಮಾರ್ಗಗಳತ್ತ ಜನರು ವಾಲುತ್ತಿದ್ದಾರೆ. ಉದಾಹರಣೆಗೆ ಸಿರಿಧಾನ್ಯಗಳ ವಿಷಯ ತೆಗೆದುಕೊಳ್ಳಿ. ನಮ್ಮ ಪೂರ್ವಜರು, ತಮ್ಮ ನಿತ್ಯ ಬದುಕಲ್ಲಿ ಇವುಗಳನ್ನು ಬಳಕೆ ಮಾಡುತ್ತಿದ್ದರು. ಅದಕ್ಕೆ ಅವರು ಗಟ್ಟಿಮುಟ್ಟಾಗಿದ್ದರು.
ನಾವು ಅದರ ಬಗ್ಗೆ ನಿರ್ಲಕ್ಷ್ಯ ಮಾಡಿದ್ದರ ಫಲವಾಗಿ ಅವುಗಳ ಮಹತ್ವ ಇದೀಗ ಅರಿವಾಗುತ್ತಿದೆ. ಮನೆಮದ್ದುಗಳ ವಿಚಾರಕ್ಕೆ ಬಂದರೆ, ಅನೇಕ ಮದ್ದುಗಳನ್ನು ಅಡುಗೆ ಮನೆಯಲ್ಲಿ ಸಿಗಬಹುದಾದ ವಸ್ತುಗಳಿಂದಲೇ ತಯಾರಿಸಬಹುದಾಗಿದೆ.
ಬೆಳ್ಳುಳ್ಳಿಯನ್ನು ಜಜ್ಜಿ ಹಾಲಿಗೆ ಬೆರೆಸಿ ಕುಡಿದರೆ ಆರೋಗ್ಯ ವೃದ್ಧಿಗೆ ದಾರಿ ಮಾಡಿಕೊಡಲಿದೆ. ನಮ್ಮಲ್ಲಿ ಬೆಳ್ಳುಳ್ಳಿಯನ್ನು ಎಲ್ಲರೂ ಮೆಚ್ಚುವುದಿಲ್ಲ.  ಬೆಳ್ಳುಳ್ಳಿಯ ಘಾಟು ವಾಸನೆಗೆ ಕೆಲವರು ಮೂಗು ಮುರಿಯುತ್ತಾರೆ. ಅದಕ್ಕೆ ಅವರದ್ದೇ ಕಾರಣಗಳಿರಬಹುದು. ಆದರೆ ಬೆಳ್ಳುಳ್ಳಿ ಹಾಲಿನಲ್ಲಿ ಆರೋಗ್ಯದ ಗುಣಗಳು ಇವೆ ಎಂಬುದನ್ನು ಕೆಲವು ಸಂಶೋಧನೆಗಳಿಂದ ಸಾಬೀತುಪಡಿಸಲಾಗಿದೆ.
ಕೆಮ್ಮು, ಅಸ್ತಮಾ, ನ್ಯುಮೋನಿಯಾ, ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರೂ ಬೆಳ್ಳುಳ್ಳಿ ಹಾಲನ್ನು ಸೇವನೆ ಮಾಡಬಹುದಾಗಿದೆ. ಅದರಿಂದ ಅಂತಹವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಕೆಮ್ಮು ಹಾಗೂ ಎದೆಕಟ್ಟಿರುವ ಸಮಸ್ಯೆಯಿಂದ ಬಳಲುತ್ತಿರುವವರು ಬೆಳ್ಳುಳ್ಳಿ ಹಾಲಿಗೆ ಒಂದು ಚಿಟಿಕೆ ಅರಿಶಿಣವನ್ನು ಹಾಕಿಕೊಂಡು ಕುಡಿದರೆ ಪರಿಹಾರ ದೊರೆಯಲಿದೆ.
ಅದೇ ರೀತಿ ಹೊಟ್ಟೆ ಸಮಸ್ಯೆ ಇದ್ದವರು ಬೆಳ್ಳುಳ್ಳಿ ಹಾಲು ಕುಡಿದರೆ ಜೀರ್ಣಪ್ರಕ್ರಿಯೆ ಸುಗಮಗೊಂಡು, ಆರೋಗ್ಯ ಸುಧಾರಿಸಲಿದೆ.
ಅಸ್ತಮಾ ಇರುವವರು ದಿನಕ್ಕೆ ಒಮ್ಮೆಯಾದರೂ ಬೆಳ್ಳುಳ್ಳಿ ತಿನ್ನಬೇಕು. ಅದೇ ರೀತಿ ನ್ಯುಮೋನಿಯಾದಿಂದ ಬಳಲುವವರು ದಿನಕ್ಕೆ ಮೂರು ಸಲ ಬೆಳ್ಳುಳ್ಳಿ ಹಾಲನ್ನು ಕುಡಿಯುವುದು ಉತ್ತಮ.
ಹೃದಯದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ತುಂಬಿಕೊಂಡಾದ ಹೃದಯದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಅಪಧಮನಿಗಳಿಗೆ ರಕ್ತ ಸಂಚಾರವು ತಡೆಯಲ್ಪಡುತ್ತದೆ.
ರಕ್ತ ಪರಿಚಲನೆ ವ್ಯವಸ್ಥೆ ಸಮರ್ಪಕವಾಗಿರಲು ಬೆಳ್ಳುಳ್ಳಿ ಹಾಲು ಸಹಕಾರಿಯಾಗುತ್ತದೆ. ಯಕೃತ್‌ನಲ್ಲಿ ವಿಷ ತುಂಬಿಕೊಂಡು ಅದಕ್ಕೆ ತುಂಬಾ ಒತ್ತಡ ಬಿದ್ದಾಗ ಬೆಳ್ಳುಳ್ಳಿ ತಿಂದರೆ ಅದು ವಿಷವನ್ನು ಹೊರಹಾಕಲು ನೆರವಾಗುವುದು.
ನಿದ್ರಾಹೀನತೆಯಿಂದ ಬಳಲುತ್ತಿರುವವರು ಬೆಳ್ಳುಳ್ಳಿ ಬೆರೆಸಿದ ಹಾಲನ್ನು ಕುಡಿದರೆ ಒಳ್ಳೆಯ ನಿದ್ರೆ ಬರಲಿದೆ.  ಬೆಳ್ಳುಳ್ಳಿ ಹಾಲು ಮನುಷ್ಯನಲ್ಲಿ ಚೇತರಿಕೆಯನ್ನು ಸುಧಾರಿಸುತ್ತದೆ.
ಬಂಜೆತನವನ್ನು ಹೊಂದಿರುವ ಪುರುಷರು ಬೆಳ್ಳುಳ್ಳಿ ಹಾಲನ್ನು ಕುಡಿಯುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.  ಬೆಳ್ಳುಳ್ಳಿ ಹಾಲು, ರಕ್ತ ಸಂಚಾರವನ್ನು ಉತ್ತಮಪಡಿಸುತ್ತದೆ.

Leave a Comment