ಬೆಳ್ಳಂದೂರು ಕೆರೆ ಅಭಿವೃದ್ಧಿ ಸಚಿವ ಜಾರ್ಜ್ ಭರವಸೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಏ. ೨೧- ಬೆಳ್ಳಂದೂರು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ತಜ್ಞರ ತಂಡವನ್ನು ರಚಿಸಲಾಗಿದೆ. ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ 1 ಮತ್ತು 2ನೇ ಹಂತದ ಕಾಮಗಾರಿಗಳು ಆರಂಭವಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಇಂದಿಲ್ಲಿ ಹೇಳಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 44 ಕೋಟಿ ರೂ. ವೆಚ್ಚದ ದೊಡ್ಡ ನೆಕ್ಕುಂದಿ ಮೇಲು ಸೇತುವೆ ಉದ್ಘಾಟನೆ. 7.5 ಕೋಟಿ ರೂ. ವೆಚ್ಚದಲ್ಲಿ 3 ಪ್ರಮುಖ ರಸ್ತೆಗಳ ಅಭಿವೃದ್ಧಿ, ಹೂಡಿಯಲ್ಲಿ ಸ್ಕೈವಾಕ್ ನಿರ್ಮಾಣ, ವರ್ತೂರು ಕೋಡಿ ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಬೆಳ್ಳಂದೂರು ಕೆರೆ ಸೇರಿದಂತೆ ರಾಮ್‌ಪುರ್, ಕಲ್ಕೆರೆ ಕೆರೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಅವನತಿಯ ಹಾದಿಯಲ್ಲಿರುವ ಕೆರೆಗಳೂ ಕೂಡ ಕಾಯಕಲ್ಪ ನೀಡಲಾಗುವುದು ಎಂದು ಅವರು ತಿಳಿಸಿದರು.

ಮೇಯರ್ ಪದ್ಮಾವತಿ ಅವರು ಮಾತನಾಡಿ, ಬೆಳ್ಳಂದೂರು ಕೆರೆಯಲ್ಲಿ ನೊರೆ ಕಾಣಿಕೊಂಡ ಪ್ರಕರಣ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯ ಮಂಡಲಿ ನೀಡಿದ್ದ ಆದೇಶಕ್ಕೆ ತಲೆಬಾಗುತ್ತೇವೆ. ಬಿಡಿಎ ವತಿಯಿಂದ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಶಾಸಕ ಅರವಿಂದ ಲಿಂಬಾವಳಿ, ಬಿಬಿಎಂಪಿ ಸದಸ್ಯರಾದ ಉದಯ್ ಕುಮಾರ್, ಶ್ವೇತಾ ವಿಜಯಕುಮಾರ್, ಹರಿಪ್ರಸಾದ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment